ದೇಶ ವಿರೋಧಿ, ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ: ಖರ್ಗೆಗೆ ಯಶ್‌ಪಾಲ್ ಸುವರ್ಣ ತಿರುಗೇಟು

Public TV
1 Min Read
yashpal suvarna mallikarjun kharge

ಉಡುಪಿ: ಕಾಂಗ್ರೆಸ್ಸಿಗೂ ನರಕಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ದೇಶ ವಿರೋಧಿ ಹಾಗೂ ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆಗೆ ಶಾಸಕ ಯಶ್‌ಪಾಲ್ ಸುವರ್ಣ ತಿರುಗೇಟು ನೀಡಿದರು.

ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ, ಕಾಂಗ್ರೆಸ್ ಈಗಾಗಲೇ ನರಕದಲ್ಲಿ ಇದೆ. ಸ್ವರ್ಗಕ್ಕೆ ಹೋಗುವಂತಹ ಅವಕಾಶವನ್ನು ದೇವರು ಅವರಿಗೆ ಕಲ್ಪಿಸುವುದಿಲ್ಲ. ದೇಶ ವಿರೋಧಿ ಹಿಂದೂ, ವಿರೋಧಿಗಳಿಗೆ ಸ್ವರ್ಗ ಇಲ್ಲ. ದೇವರು ಅವರನ್ನು ಸ್ವಾಗತ ಕೂಡ ಮಾಡುವುದಿಲ್ಲ. ದೇವರನ್ನೇ ನಂಬದ ಕಾಂಗ್ರೆಸ್ಸಿಗೆ ಸ್ವರ್ಗ-ನರಕದ ಕಲ್ಪನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸ್ವರ್ಗ, ನರಕ ಧಾರ್ಮಿಕತೆಯ ಬಗ್ಗೆ ಖರ್ಗೆಗೆ ಜ್ಞಾನ ಇಲ್ಲ. ಇಡೀ ವಿಶ್ವ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವನ್ನು ಒಪ್ಪಿದೆ. ಮೋದಿಯಂತಹ ವ್ಯಕ್ತಿ ನಮ್ಮ ರಾಷ್ಟ್ರಕ್ಕೆ ನಾಯಕನಾಗಬೇಕು ಎಂದು ಪ್ರಪಂಚ ಹಂಬಲಿಸುತ್ತಿದೆ ಎಂದು ಖರ್ಗೆ ವಿರುದ್ಧ ಹರಿಹಾಯ್ದರು.

ಖರ್ಗೆ ಅವರು ಹೇಳಿಕೆಯಿಂದ ಕಾಂಗ್ರೆಸ್‌ನ ಪ್ರಮುಖ ನಾಯಕರು ಮಜುಗರಕ್ಕೀಡಾಗಿದ್ದಾರೆ. ಕಾಂಗ್ರೆಸ್‌ನ ಸಿದ್ಧಾಂತ, ನಡವಳಿಕೆಗಳನ್ನು ನಾಯಕರು ಒಪ್ಪದ ಸ್ಥಿತಿಗೆ ಬಂದಿದ್ದಾರೆ. ಅಲ್ಪಸಂಖ್ಯಾತರ ಒಲೈಕೆಗಾಗಿ ಕಾಂಗ್ರೆಸ್‌ನಲ್ಲಿ ಇದ್ದಾರೆ. ಖರ್ಗೆ ಹೇಳಿಕೆ ಇಡೀ ದೇಶದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. ರಾಜ್ಯ, ಕೇಂದ್ರದ ಹಿರಿಯ ನಾಯಕರಾಗಿದ್ದವರಿಗೆ ಜವಾಬ್ದಾರಿ ಇರಬೇಕು ಎಂದು ಟಾಂಗ್ ಕೊಟ್ಟರು.

ಇಡೀ ವಿಶ್ವ ಭಾರತದ ಕುಂಭಮೇಳದತ್ತ ನೋಡುತ್ತಿದೆ. ಹಿರಿಯ ರಾಜಕಾರಣಿ ವಯಸ್ಸಿನ ದೋಷದಿಂದ ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಖರ್ಗೆ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು. ಅಂತರರಾಷ್ಟ್ರೀಯ ಪ್ರತಿನಿಧಿಗಳು ಕುಂಭಮೇಳಕ್ಕೆ ಪೈಪೋಟಿಯಲ್ಲಿ ಬರುತ್ತಿದ್ದಾರೆ. ಜಾತಿ, ಧರ್ಮ ಮೀರಿ ಜನ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶಕ್ಕೆ ಸ್ವಾಗತ ಮಾಡಬೇಕಾದ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Share This Article