ಬೆಂಗಳೂರು: ನಗರದ ಕತ್ರಿಗುಪ್ಪೆಯಲ್ಲಿರುವ ನಿವಾಸಕ್ಕೆ ಸಂಬಂಧಿಸಿದಂತೆ ನಾನು ಪ್ರತಿ ತಿಂಗಳು ಹಣವನ್ನು ಪಾವತಿ ಮಾಡಿದ್ದೇನೆ ಎಂದು ನಟ ಯಶ್ ಸ್ಪಷ್ಟನೆ ನೀಡಿದ್ದಾರೆ.
41ನೇ ಸಿಟಿ ಸಿವಿಲ್ ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಯಶ್, ನಾವು ಯಾವುದೇ ಹಣವನ್ನು ಬಾಕಿ ಇಟ್ಟುಕೊಂಡಿಲ್ಲ. ಪ್ರತಿ ತಿಂಗಳು ಬಾಡಿಗೆಯ ಹಣ ನಮ್ಮ ಬ್ಯಾಂಕ್ ಖಾತೆಯಿಂದಲೇ ಹೋಗುತಿತ್ತು ಎಂದು ತಿಳಿಸಿದ್ದಾರೆ.
Advertisement
ಯಶ್ ಹೇಳಿದ್ದು ಏನು?
ಮನೆ ಮಾಲೀಕರು ದೂರು ನೀಡುವಾಗ 23 ಲಕ್ಷ ರೂ. ಬಾಡಿಗೆ ನಾನು ಇಟ್ಟುಕೊಂಡಿದ್ದೇನೆ ಎಂದು ಆರೋಪಿಸಿದ್ದರು. ಆದರೆ ವಿಚಾರಣೆ ಸಂದರ್ಭದಲ್ಲಿ ಮಾಲೀಕರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದಕ್ಕೆ ನಮ್ಮ ಅಕೌಂಟ್ ಸ್ಟೇಟ್ ಮೆಂಟ್ ತೋರಿಸಿದ ಮೇಲೆ ನಾವು ನೀಡಬೇಕಿದ್ದ ಹಣದ ಮೊತ್ತ 9.6 ಲಕ್ಷ ರೂ.ಗೆ ಇಳಿದಿದೆ. ಈ ಹಣವನ್ನೂ ನಾವು ಪಾವತಿ ಮಾಡಿದ್ದೇವೆ. ಕೆಲ ಸಂದರ್ಭದಲ್ಲಿ ನನ್ನ ತಾಯಿ ಹಣದ ಮೂಲಕ ನೇರವಾಗಿ ಪಾವತಿ ಮಾಡಿದ್ದರು. ಅದಕ್ಕೆ ಯಾವುದೇ ದಾಖಲೆ ಇಲ್ಲ. ಅಷ್ಟೇ ಅಲ್ಲದೇ ಮನೆ ಬಾಡಿಗೆಯನ್ನು ಪಡೆಯುವಾಗ ನಾವು ನಾಲ್ಕು ಲಕ್ಷ ರೂ. ಹಣವನ್ನು ಅಡ್ವಾನ್ಸ್ ನೀಡಿದ್ದೇವೆ. ಈ ಎರಡು ಹಣವನ್ನು ಕೂಡಿಸಿದರೆ 9.6 ಲಕ್ಷ ರೂ. ಹಣಕ್ಕೆ ಸಮವಾಗುತ್ತದೆ ಎಂದರು.
Advertisement
Advertisement
ಮನೆ ಖಾಲಿ ಮಾಡುವ ವೇಳೆ ತಾಯಿ ಪೇಂಟ್ ಮಾಡಿಸುತ್ತಿದ್ದರು. ಇದಾದ ಬಳಿಕ ಕೀ ಕೊಡಲು ಹೋದಾಗ ತಾಯಿ ಜೊತೆ ಹೀನಾಯವಾಗಿ ನಡೆದುಕೊಂಡರು. ಮನೆಯಲ್ಲಿರುವ ವಸ್ತುಗಳನ್ನು ಬೀಸಾಕುತ್ತೇವೆ ಎಂದು ಹೆದರಿಸಿದರು. ನಾನು 40 ಸಾವಿರ ರೂ. ಹಣವನ್ನು ಬಾಕಿ ಇಟ್ಟುಕೊಳ್ಳುವ ವ್ಯಕ್ತಿ ಅಲ್ಲ. ನಾವು ಬಾಡಿಗೆ ನೀಡಿದ್ದರೂ ಬಾಡಿಗೆ ನೀಡಿಲ್ಲ ಎಂದು ಹೇಳುವುದು ಅಲ್ಲದೇ ಪೊಲೀಸರಿಗೆ ದೂರು ನೀಡುತ್ತೇವೆ, ಮಾಧ್ಯಮಗಳ ಮುಂದೆ ಹೋಗುತ್ತೇವೆ ಎಂದು ಹೇಳಿ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಿದರು. ಅಷ್ಟೇ ಅಲ್ಲದೇ ರಾಜಕೀಯ ವ್ಯಕ್ತಿಗಳ ಮೂಲಕ ನಮ್ಮನ್ನು ಬಗ್ಗು ಬಡಿಯುವ ಪ್ರಯತ್ನ ನಡೆಸಿದರು. ಯಾವಾಗ ಈ ತಂತ್ರಗಳು ನಡೆಯುತ್ತಿರುವುದು ಗೊತ್ತಾಯಿತೋ ಆಗ ನನ್ನಲ್ಲಿ ಕಿಚ್ಚು ಬಂತು. ಈಗ ನಮ್ಮ ಜೀವನ ಹೇಗೆ ಆಗಿದೆ ಎಂದರೆ ನಟರು ಅಂದ್ರೆ ರೋಡ್‍ನಲ್ಲಿ ಹೋಗುವವರು ಹೆದರಿಸುತ್ತಾರೆ. ನಾವು ಕೊಟ್ಟಿರುವುದನ್ನು ಕೊಟ್ಟೆ ಇಲ್ಲ ಅಂದಾಗ ಹೆದರಬೇಕೇ? ಈಗ ಇವರು ಹೆದರಿಸುತ್ತಾರೆ ನಾಳೆ ಇನ್ನೊಬ್ಬರು ಹೆದರಿಸುತ್ತಾರೆ. ಈ ವಿಚಾರಕ್ಕೆ ನಾನು ಆರಂಭದಲ್ಲಿ ತಲೆ ಹಾಕಿರಲಿಲ್ಲ. ಆದರೆ ಯಾವಾಗ ಬೆದರಿಸುವ ತಂತ್ರ ನಡೆಸುತ್ತಿರುವುದು ಗೊತ್ತಾಯ್ತೋ ಆಗ ನಾನು ಮುಂದುವರಿದ ಕಾರಣ ಈ ಪ್ರಕರಣ ಇಲ್ಲಿಯವರೆಗೆ ಬಂದಿದೆ ಎಂದು ತಿಳಿಸಿದರು.
Advertisement
ನಾವು ಬಾಡಿಗೆ ಸಂಬಂಧಿಸಿದ ಎಲ್ಲ ಹಣವನ್ನು ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಎಂದು ಮಾಲೀಕರು ಅವರ ಮಗಳ ತಲೆ ಮೇಲೆ ಅಣೆ ಇಟ್ಟು ಹೇಳಲಿ. ಬಹಳಷ್ಟು ಜನ ಲಕ್ಕಿ ಮನೆಯಾಗಿರುವುದರಿಂದ ಯಶ್ ಈ ಮನೆಯನ್ನು ಖಾಲಿ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇವೆಲ್ಲ ಸುಳ್ಳು. ಈ ಮನೆ ಬಿಟ್ಟ ಮೇಲೆ ರಾಜಾಹುಲಿ, ರಾಮಾಚಾರಿ ಫಿಲ್ಮ್ ಬಂದಿದೆ. ಆ ಫಿಲ್ಮ್ ಗಳು ಹಿಟ್ ಆಗಿವೆ. ಈ ರೀತಿಯ ನಂಬಿಕೆ ಇಟ್ಟು ಜೀವನ ಮಾಡುವ ವ್ಯಕ್ತಿ ನಾನಲ್ಲ ಎಂದು ವಿವರಿಸಿದರು.
ಬಾಡಿಗೆ ಕಟ್ಟದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಹೀಗಾಗಿ ನಾನು ಫೇಸ್‍ಬುಕ್ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಲೈವ್ ಆರಂಭದಲ್ಲೇ ಯಶ್ ಅಭಿಮಾನಿಗಳಿಗೆ ತಿಳಿಸಿದ್ದರು.
ಏನಿದು ಪ್ರಕರಣ?
ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಸಮೀಪ ಇರುವ ಈ ಬಾಡಿಗೆ ಮನೆಯಲ್ಲಿ ಕೆಲ ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ವಾಸವಾಗಿದ್ದರು. ಈ ಮನೆಯನ್ನು ಖಾಲಿ ಮಾಡಿಸಿಕೊಡುವಂತೆ ಯಶ್ ಮನೆ ಮಾಲೀಕ ಮುನಿಪ್ರಸಾದ್ ಅವರು ಮನೆ ಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ 41ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು, ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್ ತಾಯಿ ಪುಷ್ಪಾ ಅವರಿಗೆ ಸೂಚನೆ ನೀಡಿದ್ದಾರೆ.
ಈ ಮನೆಗೆ ಯಶ್ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಬಾಕಿ ಮೊತ್ತವಾದ 9.6 ಲಕ್ಷ ರೂಪಾಯಿಯನ್ನ ಮಾಲೀಕರಿಗೆ ಕೊಡುವಂತೆ ಕೋರ್ಟ್ ಆದೇಶಿಸಿದೆ. ಅಷ್ಟೇ ಅಲ್ಲದೇ ಯಶ್ ಅವರು ಮುಂಗಡವಾಗಿ ನೀಡಿದ್ದ 4 ಲಕ್ಷ ರೂ. ಹಣವನ್ನು ಪಾವತಿಸುವಂತೆ ಮನೆ ಮಾಲೀಕರಿಗೆ ಸೂಚಿಸಿದೆ.
https://www.facebook.com/TheOfficialYash/videos/2291921764368555/