ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‍ವುಡ್ ನಲ್ಲಿ ಓಡುವ ಕುದುರೆಯಾಗಿದ್ದು, ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚಾಗುತ್ತಲೇ ಇದ್ದಾರೆ. ಯಶ್ ಅಭಿನಯ, ಚಿತ್ರಗಳು ಮತ್ತು ರಾಕಿಂಗ್ ಸ್ಟಾರ್ ಮಾಡುತ್ತಿರುವ ಕೆಲಸಗಳು ಯುವಕರಿಗಂತು ತುಂಬಾನೇ ಇಷ್ಟವಾಗುತ್ತದೆ.
ಯಶ್ ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ಆತಂಕ ತರುವಂತೆ ಮಟ್ಟಿಗೆ ತಲುಪುತ್ತದೆ. ಅಂತದ್ದೆ ಒಂದು ಘಟನೆ ಇತ್ತೀಚಿಗಷ್ಟೇ ನಡೆದಿತ್ತು. ಉತ್ತರ ಕರ್ನಾಟಕದ ಅಗಡಿ ಊರಿನಲ್ಲಿ ಹಬ್ಬ ನಡೆಯುತ್ತಿದ್ದು, ಊರಿನ ಹಬ್ಬದ ಸಂದರ್ಭದಲ್ಲಿ ಯಶ್ ಅವರ ಕಟೌಟ್ ಕಟ್ಟಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಗೆ ವಿದ್ಯುತ್ ತಂತಿ ತಗುಲಿ ಮೈ ತುಂಬಾ ಗಾಯಗಳಾಗಿತ್ತು. ನಂತರ ಒಂದು ಕೈಯನ್ನೂ ಕೂಡ ಕಳೆದುಕೊಂಡರು.
ಈ ವಿಚಾರ ತಿಳಿದು ಅನೇಕರು ಆತಂಕಕ್ಕೆ ಒಳಗಾಗಿದ್ದರು. ಅಭಿಮಾನಿಗಳಿಂದ ವಿಷಯ ತಿಳಿದ ರಾಕಿಂಗ್ ಸ್ಟಾರ್ ಅಭಿಮಾನಿಯ ನೆರವಿಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಒಂದೊಳ್ಳೆ ಕಿವಿ ಮಾತನ್ನು ತಿಳಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಯಶ್ ಅಭಿಮಾನಿ ಕೈ ಕಳೆದುಕೊಂಡ ವಿಚಾರ ತಿಳಿದ ತಕ್ಷಣ ‘ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ’ದ ಸದಸ್ಯರು ಅಗಡಿ ಗ್ರಾಮಕ್ಕೆ ಭೇಟಿ ನೀಡಿ ಗಾಯಗೊಂಡ ಅಭಿಮಾನಿಯ ಆರೋಗ್ಯವನ್ನ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಜೊತೆಗೆ ಒಂದು ಲಕ್ಷದ ಚೆಕ್ ಕೂಡ ನೀಡಿದ್ದಾರೆ.
ಯಾವುದೇ ಕೆಲಸ ಮಾಡುವಾಗ ಸಮಯ ಪ್ರಜ್ಞೆ ಇರಲಿ. ಅಭಿಮಾನವಿರಲಿ ಆದರೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಉತ್ಸಾಹದಿಂದ ಏನೋ ಮಾಡಲಿ ಹೋಗಿ ಕನಸಿನ ಜೀವನವನ್ನ ಕಳೆದುಕೊಳ್ಳಬೇಡಿ. ಇಂತಹ ಘಟನೆಗಳು ಆಗಾಗ ಆಗುತ್ತಲೇ ಇರುತ್ತವೆ. ಆಗ ಸ್ಟಾರ್ ಗಳು ಜವಾಬ್ದಾರಿ ತೆಗೆದುಕೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಆದರೆ ಎಲ್ಲದಕ್ಕೂ ಕಲಾವಿದರು ಹೊಣೆ ಆಗಲು ಸಾಧ್ಯವಿಲ್ಲ. ಅಭಿಮಾನ ಇರಲಿ ಆದರೆ ಅದು ಅತೀ ಆಗದಿದ್ದರೆ ಒಳ್ಳೆಯದು ಎಂದು ಯಶ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.