ಕಳೆದ ಒಂದು ವಾರದಿಂದ ಹಿರಿಯ ನಟಿ ಲೀಲಾವತಿ (Leelavati) ಅವರ ಪುತ್ರನ ಮದುವೆ (Wedding) ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೆಹು (Prakash Raj Mehu) ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಲೀಲಾವತಿ ಅವರ ಪುತ್ರ ವಿನೋದ್ ರಾಜ್ (Vinod Raj) ಮದುವೆ ವಿಚಾರ ಪ್ರಸ್ತಾಪ ಮಾಡಿದ್ದರು. ವಿನೋದ್ ರಾಜ್, ಅವರ ಪತ್ನಿ ಮತ್ತು ಮಗನ ಫೋಟೋ ಅದಾಗಿತ್ತು. ಈ ವಿಷಯ ಆಚೆ ಬರುತ್ತಿದ್ದಂತೆಯೇ ಲೀಲಾವತಿ ಅವರು ಮಗನ ಮದುವೆ ಆಗಿದೆ ಎನ್ನುವ ಸತ್ಯವನ್ನು ಆಚೆ ಹಾಕಿದ್ದರು.
ಈವರೆಗೂ ಮುಚ್ಚಿಟ್ಟುಕೊಂಡು ಬಂದಿದ್ದ ಸತ್ಯವನ್ನು ಆ ಫೋಟೋ ಬಿಚ್ಚಿಟ್ಟಿತ್ತು. ಹಾಗಾಗಿ ಆ ಫೋಟೋವನ್ನು ಕಳುಹಿಸಿದವರು ಯಾರು? ಆ ಫೋಟೋ ಹೇಗೆ ಸಿಕ್ಕಿತು ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿನೋದ್ ರಾಜ್ ಮಾತನಾಡಿದ್ದಾರೆ. ‘ಆ ಫೋಟೋ ಹೇಗೆ ಸಿಕ್ಕಿತು, ಯಾರು ಕೊಟ್ಟರು ಎನ್ನುವುದು ಗೊತ್ತಿಲ್ಲ. ಯಶ್ ಅವರ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ, ದುಷ್ಮನ್ ಕಿದರ್ ಹೈ ಅಂದರೆ, ಊರುತುಂಬಾ ಹೈ’ ಅಂತ. ನಮಗೂ ಹಾಗೆ ಆಗಿರಬಹುದು ಎಂದಿದ್ದಾರೆ.
ಪ್ರಕಾಶ್ ರಾಜ್ ಮೆಹು ಅವರ ಈ ನಡೆಗೆ ವಿನೋದ್ ರಾಜ್ (Vinod Raj) ಬೇಸರವನ್ನು ವ್ಯಕ್ತಪಡಿಸಿದ್ದು ‘ಅಮ್ಮ ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಅವರು ಕರ್ನಾಟಕದ ಆಸ್ತಿ. ದಯವಿಟ್ಟು ಅವರನ್ನು ನೆಮ್ಮದಿಯಾಗಿ ಇರಲಿಬಿಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಮಗನ ಮದುವೆ ಹಾಗೂ ಪತಿಯ ಕುರಿತಾಗಿ ವಿಷಯವನ್ನು ಕೆದಕಿ ನೋವು ಮಾಡುತ್ತಿರುವವರು ಕುರಿತು ಲೀಲಾವತಿ ಅವರು ನೋವಿನಿಂದಲೇ ಮಾತನಾಡಿ, ‘ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನಮ್ಮ ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತಿದೆ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ’ ಎಂದಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲೀಲಾವತಿ ಅವರು ಮಗನ ಮದುವೆ ವಿಚಾರವನ್ನೂ ಮಾತನಾಡಿದ್ದಾರೆ. ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂತೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಲೀಲಾವತಿ, ‘ನನ್ನ ಮಗನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಕುಹಕವಾಡಿದರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.