ಮೈಸೂರು: ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಳ ಮುಡಿ ತೆಗೆಸಿದ್ದಾರೆ.
ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಇಂದು ಬೆಳ್ಳಂಬೆಳಗ್ಗೆ ಯಶ್ ಮತ್ತು ರಾಧಿಕಾ ಆಗಮಿಸಿದ್ದರು. ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದರು.
ಕಳೆದ ವರ್ಷ ಯಶ್ ಹಾಗೂ ರಾಧಿಕಾ ಐರಾಗೆ ಕಿವಿ ಚುಚ್ಚಿಸಿದ್ದರು. ಈ ವೇಳೆ ಯಶ್ ಕಣ್ಣೀರು ಹಾಕಿದ್ದ ವಿಷಯವನ್ನು ರಾಧಿಕಾ ಹಂಚಿಕೊಂಡಿದ್ದರು. ಇನ್‍ಸ್ಟಾದಲ್ಲಿ ರಾಧಿಕಾ, “ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ” ಎಂದು ರಾಧಿಕಾ ಪೋಸ್ಟ್ ಮಾಡಿದ್ದರು.
ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.
ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು.