ಯಶ್ (Yash) ಮಹಾ ಯಾಗಕ್ಕೆ ಕ್ಷಣಗಣನೆ ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಆ ಮಹಾ ಯಜ್ಞಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಯುದ್ಧಕ್ಕೆ ಹೊರಡುವ ಮುಂಚೆ ಏನೇನು ತಯಾರಿ ಮಾಡಿಕೊಳ್ಳಬೇಕೊ ಎಲ್ಲವನ್ನೂ ಏಕಾಂಗಿಯಾಗಿ ನಿಭಾಯಿಸುತ್ತಿದ್ದಾರೆ. ಇಷ್ಟೆಲ್ಲ ಕಾಯುತ್ತಿರುವ ವಿಶ್ವ ಸಿನಿ ಪ್ರೇಮಿಗಳಿಗೆ ಅದ್ಯಾವ ಅದ್ಭುತ ಕಾಣಿಕೆ ಕೊಡಲಿದ್ದಾರೆ? ಏನು ನಡೆಯುತ್ತಿದೆ ರಾಕಿಭಾಯ್ ಮನಸಲ್ಲಿ ಮಂಥನ? ಹೇಗಿರಲಿದೆ ಜಗತ್ತೇ ಬೆರಗುಗೊಳ್ಳುವಂಥ ಕಥನ? ಇಲ್ಲಿದೆ ಮಾಹಿತಿ.
ಯಾರೂ ಉಸಿರು ಬಿಡುತ್ತಿಲ್ಲ. ಒಂದೇ ಒಂದು ಸಾಲನ್ನು ಈಚೆ ಚೆಲ್ಲುತ್ತಿಲ್ಲ. ಆದರೆ ಎಲ್ಲರ ಮನಸಲ್ಲಿ ಕಾಡುತ್ತಿರುವ ಪ್ರಶ್ನೆ ಒಂದೇ. ಕೆಜಿಎಫ್ ಕೊಟ್ಟಂಥ ಹುಡುಗ ಈಗ ಅದನ್ನು ಮೀರಿಸಿ ಇನ್ನೇನು ನೀಡಲಿದ್ದಾನೆ? ಅದ್ಯಾವ ನಯಾ ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಲಿದ್ದಾನೆ? ಜಗತ್ತೇ ಬೆಚ್ಚಿ ಬೆರಗಾಗುವ ದೃಶ್ಯ ಕಾವ್ಯವನ್ನು ಅದ್ಯಾವಾಗ ಹೆಣೆಯಲಿದ್ದಾರೆ? ಕೆಜಿಎಫ್ 2 (KGF 2) ಯಶಸ್ಸಿನ ಬಳಿಕ ಮುಂದೇನು? ಎಂಬುದಕ್ಕೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಬಿಗ್ ಬಾಸ್‌ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ ಚಾರ್ಲಿ
Advertisement
Advertisement
ರಾಕಿಭಾಯ್ ಕಳೆದ ಎರಡು ವರ್ಷದಿಂದ ಯಾಗ ಮಾಡುತ್ತಿದ್ದಾರೆ. ಅದು ಸಿನಿಮಾ ಯಾಗ. ಅಲ್ಲಿರುವುದು ಮತ್ತವರಿಗೆ ಕಾಣುತ್ತಿರುವುದು ಎರಡೇ ದೃಶ್ಯ. ಒಂದು ಮಾಡಬೇಕಿರುವ ಸಿನಿಮಾ, ಇನ್ನೊಂದು ನೋಡಬೇಕಾಗಿರುವ ಜನ. ಇದಷ್ಟೇ ಅವರ ಕಣ್ಣಲ್ಲಿ ಮೆರವಣಿಗೆ. ಹೀಗಾಗಿಯೇ ಅವರು ಇದನ್ನು ಹೇಳುತ್ತಾರೆ. ಇಲ್ಲಿವರೆಗೆ ಜನರು ನೋಡಿರದ ಸಿನಿಮಾ. ದಿ ಬೆಸ್ಟ್ ಸಿನಿಮಾ, ಕನ್ನಡದ ಗಡಿ ದಾಟಿ ಸಾಗರದಾಚೆಗೂ ಉಘೇ ಉಘೆ ಎನ್ನಲಿರುವ ಸಿನಿಮಾಗೆ ಭರದಿಂದ ಯಶ್ ಸಿದ್ಧತೆ ಮಾಡ್ತಿದ್ದಾರೆ.
Advertisement
Advertisement
ನಿಮಗೆ ಗೊತ್ತಿಲಿಕ್ಕಿಲ್ಲ. ಯಶ್ ಹೊಸ ಸಿನಿಮಾಕ್ಕೆ ನಾನೇ ಡೈರೆಕ್ಷನ್ ಮಾಡುತ್ತೇನೆ. ಹೀಗಂತ ಅಂದುಕೊಂಡು ಬಂದವರು ನೂರಾರು ಜನ. ಕತೆಯನ್ನಷ್ಟೇ ಹೇಳಲಿಲ್ಲ. ಚಿತ್ರಕತೆಯನ್ನೂ ತಂದಿದ್ದರು. ಇನ್ನು ಕೆಲವರು ನಿರ್ಮಾಪಕರನ್ನು ಹುಡುಕಿಕೊಂಡು ಬಂದು ನಿಮಗೆಷ್ಟು ಹಣ ಬೇಕು ಕೇಳಿ ಇದನ್ನು ಒತ್ತಿ ಒತ್ತಿ ಹೇಳಿದರು. ಹಣ ಕೊಟ್ಟರೆ ಒಂದೇ ಏಟಿಗೆ ಹಕ್ಕಿಯನ್ನು ಬಲೆಗೆ ಬೀಳಿಸಿಕೊಳ್ಳಬಹುದೆನ್ನುವ ಸಹಜ ಬಿಜಿನೆಸ್ ಲೆಕ್ಕಾಚಾರ ಕೆಲವರಲ್ಲಿತ್ತು. ಯಶ್ ಕಾಸಿನ ಹಿಂದೆ ಬಿದ್ದಿಲ್ಲ. ಬೆಳ್ಳಿತೆರೆಗೆ ಚಿಗುರು ಮಾವಿನೆಲೆ ಕಟ್ಟಲು ಎದ್ದು ನಿಂತಿದ್ದಾರೆ.
ಯಾರ‍್ಯಾರೊ ನಿರ್ದೇಶಕರು ಬಂದರು. ಹೋದರು. ಕೊನೆಗೆ ಉಳಿದಿದ್ದು, ಕೇವಲ ಒಂದೇ ಒಂದು ಹೆಸರು. ಅವರೇ ಗೀತು ಮೋಹನ್‌ದಾಸ್. ಮಲಯಾಳಂ ನಿರ್ದೇಶಕಿ. ಮಾಡಿದ್ದು ಎರಡು ಮೂರು ಸಿನಿಮಾ. ಅವು ಮಾಸ್ ಅಥವಾ ಕಮರ್ಶಿಯಲ್ ಕಂಟೆಂಟ್ ಹೊಂದಿಲ್ಲ. ನಲವತ್ತೆರಡು ವರ್ಷದ ಮಲಯಾಳಂ ನಿರ್ದೇಶಕಿ ಹೇಳಿದ ಕತೆ ಫೈನಲ್ ಆಯಿತು. ಅಲ್ಲಿಂದ ಇನ್ನೊಂದು ಯುದ್ಧಕ್ಕೆ ಇಳಿದರು. ಒಂಬತ್ತು ತಿಂಗಳಾಗಿದೆ. ಪ್ರತಿ ದೃಶ್ಯ,ಪ್ರತಿ ಸಂಭಾಷಣೆ, ಪ್ರತಿ ಪಾತ್ರ, ಪ್ರತಿ ಕ್ಯಾಮೆರಾ ಫ್ರೇಮು, ಪ್ರತಿ ಕಲರ್ ಕಾಂಬಿನೇಶನ್ ಎಲ್ಲವೂ ಹೀಗೆ ಮೂಡಿ ಬರಬೇಕು ಯಶ್ ಪ್ಲ್ಯಾನ್ ಮಾಡಿದ್ದಾರೆ. ಒಂದರ್ಥದಲ್ಲಿ ಸಿನಿಮಾ ಮುಗಿದಿದೆ. ಇದನ್ನೂ ಓದಿ:ಸೋಲಿನ ಸುಳಿಯಲ್ಲಿ ಚಿರಂಜೀವಿ, ಹೊಸ ನಿರ್ಧಾರ ಕೈಗೊಂಡ ಮೆಗಾಸ್ಟಾರ್
ಸಿನಿಮಾ ಮುಗಿದಿದೆ ಅಂದರೆ ಏನರ್ಥ? ಈಗಾಗಲೇ ಸಿನಿಮಾ ಇಡೀ ತಂಡ ನೋಡಿದೆ ಅಂದರೆ ಏನು ವಿಚಾರ? ಇದಕ್ಕೆ ಉತ್ತರ ಇಲ್ಲಿದೆ. ಇಡೀ ಚಿತ್ರಕತೆಯನ್ನು ಅಷ್ಟೊಂದು ಶ್ರದ್ಧೆ, ನಿಯತ್ತು ಹಾಗೂ ಭಕ್ತಿಯಿಂದ ರೂಪಿಸಲಾಗಿದೆ. ಬರಿ ಒಂದು ದೃಶ್ಯ, ಒಂದು ಸಂಭಾಷಣೆ ಮಾತ್ರ ಅಲ್ಲ. ಒಂದೊಂದು ಶಾಟ್ ಜೊತೆ ಸಂಭಾಷಣೆ, ಪಾತ್ರ ಮತ್ತು ಅದಕ್ಕೆ ಬೇಕಾಗುವ ಕಾಸ್ಟ್ಯೂಮ್ ಯಾವುದನ್ನೂ ಆಮೇಲೆ ನೋಡಿದರಾಯಿತು ಎಂದು ಬಿಟ್ಟಿಲ್ಲ. ಶಿಸ್ತು-ಸಂಯಮ ಮತ್ತು ಹಠ ಇವುಗಳನ್ನು ನಲವತ್ತು ಜನರ ತಂಡ ಹೊತ್ತುಕೊಂಡಿದೆ. ಅವರಿಗೆಲ್ಲ ಸಾರಥಿಯಾಗಿ ಯಶ್ ಅಖಾಡಕ್ಕೆ ಇಳಿಯಲು ಮೀಸೆ ತಿರುವಿದ್ದಾರೆ. ಗರಗರಗರ ಸದ್ದು ಮಾಡಲು ಕ್ಯಾಮೆರಾ ಸಿಂಗಾರಗೊಂಡಿದೆ.
ಇದು ಯಶ್ ನಡೆಸುತ್ತಿರುವ ಮಹಾ ಯಜ್ಞದ ಕಥನ. ಕನ್ನಡ ಚಿತ್ರರಂಗ ಬಿಡಿ. ಭಾರತೀಯ ರಂಗವನ್ನೂ ಸೈಡಿಗಿಡಿ. ಅದಕ್ಕೆಲ್ಲ ಸೆಡ್ಡು ಹೊಡೆದು ಹಾಲಿವುಡ್ ಕೂಡ ಕ್ಷಣ ಮೌನವಾಗಬೇಕು. ಮರು ಗಳಿಗೆ ಬೆಚ್ಚಬೇಕು. ನಂತರ ಹೊಡೆವ ಕೇಕೆ ಇದೆಯಲ್ಲ. ಅದು ಮತ್ತೆ ಗಂಧದ ಗುಡಿ ಬಿಟ್ಟ ಗಾಂಢೀವಕ್ಕೆ ಕೈ ಎತ್ತಿ ಮುಗಿವಂತಿರಬೇಕು. ಶರಣಾಗತಿಯೇ ಅಂತಿಮ ದಾರಿ ಎಂದು ಘೋಷಿಸಬೇಕು. ಇದೆಲ್ಲ ಆಗುವ ಮಾತಾ? ಅನುಮಾನ ಇದೆ. ಒಬ್ಬ ಭಕ್ತ ಗಂಟೆ ಬಾರಿಸಿದರೆ ದೇವಾಲಯದ ಗೋಡೆಗೆ ಮಾತ್ರ ಕೇಳುತ್ತದೆ. ಆದರೆ ಖುದ್ದು ದೇವರೇ ಗಂಟೆ ಬಾರಿಸಿದರೆ. ಅಷ್ಟದಿಕ್ಕುಗಳೂ ಆರತಿ ಎತ್ತುತ್ತವೆ. ಅದು ಸಾಧ್ಯವಾ ಅನ್ನೋದು ಪ್ರಶ್ನೆ. ಸಾಧ್ಯವಾಗಲಿ ಅನ್ನೋದು ಅಗತ್ಯಕ್ಕಿಂತ ಹೆಚ್ಚಲ್ಲದ ನಂಬಿಕೆ. ಯಶ್ ಅಖಾಡಕ್ಕೆ ಇಳಿಯಲು ಇನ್ನೂ ಹೆಚ್ಚು ದಿನ ಬೇಕಿಲ್ಲ.