ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ

Public TV
2 Min Read

ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ (Rain) ದೆಹಲಿಯ (Delhi) ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ಸುಪ್ರಿಂ ಕೋರ್ಟ್ (Supreme Court) ವರೆಗೂ ಪ್ರವಾಹದ ನೀರು ತಲುಪಿದೆ.

ಪ್ರವಾಹದಿಂದ ಉಂಟಾಗಿರುವ ಹಾನಿಯ ಆದ್ಯತೆಯ ಮೇಲೆ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರ್ಕಾರ ಸೂಚಿಸಿದೆ. ಕೆಲವು ನಿಯಮಗಳ ಉಲ್ಲಂಘನೆಯೇ ಈ ಪ್ರವಾಹಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಎಂಜಿನಿಯರ್‍ಗಳು ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ. ಸೇನೆಯ ಸಹಾಯ ಪಡೆಯಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇದನ್ನೂ ಓದಿ: KRS ಒಳಹರಿವಿನ ಪ್ರಮಾಣ ಕುಸಿತ

Yamuna Water Reaches Supreme Court 1

ಮಳೆ ಕಡಿಮೆಯಾಗುತ್ತಿದ್ದು, ಯಮುನಾ (Yamuna) ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ನಿಧಾನವಾಗಿ ಇಳಿಮುಖವಾಗುತ್ತಿದೆ. ಶುಕ್ರವಾರ (ಇಂದು) ಬೆಳಿಗ್ಗೆ 6 ಗಂಟೆಯ ವೇಳೆಗೆ ಯಮುನಾ ನದಿಯ ನೀರಿನ ಮಟ್ಟವು 208.46 ಮೀಟರ್‍ಗಳಷ್ಟಿದೆ. ಗುರುವಾರ ರಾತ್ರಿಯ ವೇಳೆಗೆ 208.66 ಮೀಟರ್ ಸಮೀಪ ಇತ್ತು. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ. ಐಟಿಓ ಮತ್ತು ರಾಜ್‍ಘಾಟ್‍ನಲ್ಲಿರುವ ಪ್ರದೇಶಗಳು ಇನ್ನೂ ಮುಳುಗಡೆಯಾಗಿದೆ. ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಬಳಿ ಇನ್ನೂ ಪ್ರವಾಹದ ಭೀಕರತಯೆ ಎದ್ದು ಕಾಣುತ್ತಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.

ಈ ವಿಚಾರವಾಗಿ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಮುಂದಿನ 24 ಗಂಟೆಗಳಲ್ಲಿ ಯಮುನಾದಲ್ಲಿ ನೀರಿನ ಮಟ್ಟ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿಯಿಂದಾಗಿ ಶಾಲೆ ಕಾಲೇಜುಗಳನ್ನು ಹಾಗೂ ತೀರ ಅಗತ್ಯವಿಲ್ಲದ ಸರ್ಕಾರಿ ಕಚೇರಿಗಳನ್ನು ಭಾನುವಾರದವರೆಗೆ ಮುಚ್ಚುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಸಿಂಘು ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಭಾರಿ ಸರಕು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಪಂಜಾಬ್, ಹರಿಯಾಣ ರಾಜ್ಯಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಹರಿಯಾಣದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿದೆ. ಪಂಜಾಬ್‍ನಿಂದ 11 ಸಾವುಗಳು ವರದಿಯಾಗಿದೆ. ಕಳೆದ ಮೂರು ದಿನಗಳಿಂದ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಒಟ್ಟಾರೆಯಾಗಿ, ಪಂಜಾಬ್‍ನಲ್ಲಿ 14 ಮತ್ತು ಹರಿಯಾಣದಲ್ಲಿ 7 ಜಿಲ್ಲೆಗಳು ಪ್ರವಾಹದಿಂದ ಭಾರೀ ಹಾನಿಗೊಳಗಾಗಿವೆ. ಇದನ್ನೂ ಓದಿ: RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

Web Stories

Share This Article