Connect with us

Latest

ರೈಲ್ವೆ ಹಳಿ ದಾಟುವವರನ್ನು ಹೊತ್ತೊಯ್ಯುವ ಯಮರಾಜ

Published

on

-ಪಶ್ಚಿಮ ರೈಲ್ವೆ, ಆರ್‌ಪಿಎಫ್‌ನ ಹೊಸ ಪ್ಲಾನ್

ಮುಂಬೈ: ರೈಲು ಬರುತ್ತಿರುವುದನ್ನು ಗಮನಿಸದೆ ಬೇಕಾಬಿಟ್ಟಿ ರೈಲ್ವೆ ಹಳಿಗಳ ಮೇಲೆ ಓಡಾಡುವುದು, ಹಳಿ ದಾಟುವವರ ಮುಂದೆ ಯಮರಾಜ ಪ್ರತ್ಯಕ್ಷವಾಗಿ ಅವರನ್ನು ಹೊತ್ತೊಯ್ಯುತ್ತಿರುವ ವಿಡಿಯೋ, ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇದೇನಪ್ಪಾ ಯಮರಾಜ ಎಲ್ಲಿಂದ ಪ್ರತ್ಯಕ್ಷನಾಗ್ತಾನೆ? ಏನಿದು ಹೊಸ ಕಥೆ ಎಂದು ಹತ್ತಾರು ಪ್ರಶ್ನೆ ಕಾಡುತ್ತದೆ. ಆದರೆ ಈ ಯಮರಾಜ ನಿಮ್ಮ ಜೀವ ತೆಗೆಯುವುದಿಲ್ಲ, ಬದಲಿಗೆ ನಿಮ್ಮ ಜೀವ ಉಳಿಸುತ್ತಾನೆ. ಹೌದು. ಮುಂಬೈನಲ್ಲಿ ರೈಲ್ವೆ ಹಳಿ ದಾಟುವವರ ಮುಂದೆ ಯಮರಾಜ ಬಂದು ಅವರನ್ನು ಹೊತ್ತೊಯ್ದು, ಹಳಿಯಿಂದ ಬದಿಗೆ ತಂದು ಬಿಡುತ್ತಾನೆ. ಅಸಲಿಗೆ ಈ ಯಮರಾಜ ಹೀಗೆ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಲು ಕಾರಣ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಇಲಾಖೆ. ಇದನ್ನೂ ಓದಿ:ಹಳಿ ದಾಟಲು ಹೋಗಿ ರೈಲಿನ ಅಡಿ ಸಿಲುಕಿದ್ದ ಅಜ್ಜಿ ಪವಾಡ ರೀತಿ ಬಚಾವ್

ರೈಲ್ವೆ ಹಳಿಗಳನ್ನು ಸಾರ್ವಜನಿಕರು ಬೇಕಾಬಿಟ್ಟಿ ದಾಟುವಂತಿಲ್ಲ. ಅದರಲ್ಲೂ ರೈಲು ಬರುತ್ತಿದೆ ಎಂದರೆ ರೈಲ್ವೆ ಸಿಗ್ನಲ್ ದಾಟುವಂತಿಲ್ಲ. ಆದರೂ ಸಾರ್ವಜನಿಕರು, ಪ್ರಯಾಣಿಕರು ರೈಲ್ವೆ ಹಳಿ ದಾಟಲು ಹೋಗಿ ರೈಲಿಗೆ ಸಿಕ್ಕಿ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗಂತೂ ಈ ರೀತಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರಯಾಣಿಕರು, ಸಾರ್ವಜನಿಕರ ಜೀವ ಉಳಿಸಲು ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಇಲಾಖೆ ಯಮರಾಜನ ಹೊಸ ಪ್ಲಾನ್ ಮಾಡಿದ್ದಾರೆ.

ರೈಲ್ವೆ ಹಳಿಗಳ ಮೇಲೆ ಓಡಾಡುವವರನ್ನು ತಡೆಯಲೆಂದೇ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಹೊಸ ಯೋಜನೆ ಜಾರಿಗೆ ತಂದಿದೆ. ರೈಲ್ವೆ ಹಳಿ ದಾಟುವ ಬಗ್ಗೆ ಜಾಗೃತಿ ಮೂಡಿಸಲು ಯಮರಾಜನ ವೇಷಧಾರಿಯೊಬ್ಬನನ್ನು ನಿಯೋಜಿಸಿದೆ. ಈತ ಹಳಿ ಮೇಲೆ ಸಾಗುವ ಮಂದಿಯನ್ನು ತಡೆದು, ಅವರನ್ನು ಹೊತ್ತುಕೊಂಡು ಬಂದು ರಸ್ತೆಗೆ ಅಥವಾ ಪ್ಲಾಟ್‍ಫಾರ್ಮ್ ಮೇಲೆ ತಂದು ಬಿಡುತ್ತಾನೆ. ಹಳಿ ದಾಟಬೇಡಿ, ಸ್ಕೈವಾಕ್‍ಗಳನ್ನು ಬಳಲಿ ಎಂದು ಜಾಗೃತಿ ಮೂಡಿಸುತ್ತಾನೆ.

ಸೆಪ್ಟೆಂಬರ್ ನಲ್ಲಿ, ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತಾಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ಲಾಟ್‍ಫಾರ್ಮ್ ದಾಟಲು ಯತ್ನಿಸುತ್ತಿದ್ದ ವೃದ್ಧೆಯೊಬ್ಬರು ಹಳಿಗಳ ಮೇಲೆ ಜಾರಿಬಿದ್ದಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲಿನ ಕೆಳಗೆ ಸಿಲುಕಿದ್ದು, ಅದೃಷ್ಟವಶಾತ್ ಬದುಕುಳಿದಿದ್ದರು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಆದ್ದರಿಂದ ಈ ರೀತಿ ಪ್ರಕರಣಗಳನ್ನು ತಡೆಯಲು ರೈಲ್ವೆ ಇಲಾಖೆ ಯಮರಾಜನನ್ನು ನೇಮಿಸುವ ಮೂಲಕ ಹೊಸ ಪ್ಲಾನ್ ಮಾಡಿದೆ.

ಯಮರಾಜನ ವೇಷಧಾರಿ ಹಳಿ ದಾಟುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಫೋಟೋವನ್ನು ರೈಲ್ವೆ ಇಲಾಖೆ ಟೀಟ್ ಮಾಡಿತ್ತು. ಈ ಹೊಸ ಕ್ರಮ ಎಲ್ಲರ ಗಮನಸೆಳೆದಿದ್ದು, ಜನರು ಯಮರಾಜನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಯಮರಾಜನ ಫೋಟೋ, ವಿಡಿಯೋ ವೈರಲ್ ಆಗುತ್ತಿದೆ.

Click to comment

Leave a Reply

Your email address will not be published. Required fields are marked *