ಅಶ್ವಥ್ ಸಂಪಾಜೆ
ಬೆಂಗಳೂರು: ಈಗ ಜಗತ್ತೇ ನಮ್ಮ ಅಂಗೈಯಲ್ಲಿ ಸಿಗುತ್ತದೆ. ಎಲ್ಲವೂ ಡಿಜಿಟಲ್ ಆಗುತ್ತಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ ಪ್ರಸಂಗಗಳು ಡಿಜಿಟಲ್ ಮೂಲಕ ಅಭಿಮಾನಿಗಳನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆಯು ನವೀನ ಮಾದರಿಯ ಯೋಜನೆಗಳ ಮೂಲಕ ಯಕ್ಷಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಯಕ್ಷಗಾನ ಪ್ರಸಂಗ ಪ್ರದರ್ಶನದಲ್ಲಿ ಕುಣಿತ, ವೇಷ, ಸಂಭಾಷಣೆಗಳ ಜೊತೆಗೆ ಪದಗಳು/ಹಾಡುಗಳು ಬಹಳ ಮುಖ್ಯಪಾತ್ರ ವಹಿಸುತ್ತದೆ. ಪ್ರಸಂಗ ಪದ್ಯಗಳು ಯಕ್ಷಗಾನ ಸಾಹಿತ್ಯದ ಜೀವಾಳ. ಭಾಗವತರು ಈ ಪದಗಳನ್ನು ಹಾಡುವ ಮೂಲಕ ಪ್ರಸಂಗವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಯಕ್ಷಾಸಕ್ತರಿಂದ ಮರೆಯಾಗುತ್ತಿರುವ ಮತ್ತು ದುರ್ಲಭವಾಗುತ್ತಿರುವ ಪ್ರಸಂಗ ಸಾಹಿತ್ಯವು ಸರ್ವರಿಗೂ ಸುಲಭವಾಗಿ ತಲುಪುವಂತೆ ಮಾಡಲು ‘ಯಕ್ಷವಾಹಿನಿ’ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ಕೈಂಕರ್ಯದಲ್ಲಿ ಸದ್ದಿಲ್ಲದಂತೆ ತೊಡಗಿದೆ. ಇದೇ ನಿಟ್ಟಿನಲ್ಲಿ ಯಕ್ಷಕವಿಗಳಿಂದ ರಚಿಸಲ್ಪಟ್ಟ ಹಲವಾರು ಮುದ್ರಿತ/ಹಸ್ತಪ್ರತಿಗಳ ಸಂಗ್ರಹಣೆ, ದಾಖಲೀಕರಣ ಮತ್ತು ಅವುಗಳ ವಿದ್ಯುನ್ಮಾನ ಪ್ರತಿಗಳನ್ನು ಅಂತರ್ಜಾಲದ ಸಹಾಯದಿಂದ ಆಸಕ್ತರಿಗೆ ನಿಲುಕುವಂತೆ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಈಗಾಗಲೇ 600ಕ್ಕೂ ಹೆಚ್ಚಿನ ಸ್ಕ್ಯಾನ್ ಪ್ರತಿಗಳು ಸಂಗ್ರಹಗೊಂಡಿದ್ದು ಈಗ ‘ಪ್ರಸಂಗಪ್ರತಿಸಂಗ್ರಹ‘ ಎಂಬ ಜನಸ್ನೇಹಿ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಲಾಗಿದೆ.
Advertisement
Advertisement
ಯಕ್ಷವಾಹಿನಿ ಸಂಸ್ಥೆಯು ಮುಖ್ಯವಾಗಿ ಎರಡು ರೀತಿಯಲ್ಲಿ ಯಕ್ಷಗಾನ ಪ್ರಸಂಗಗಳು ಡಿಜಿಟಲೀಕರಣ ಯೋಜನೆಗಳನ್ನು ಹಮ್ಮಿಕೊಂಡಿದೆ.. ಮೊದಲನೆಯದಾಗಿ ಯಕ್ಷಪ್ರಸಂಗಕೋಶ: ಇದರಲ್ಲಿ ಪ್ರಸಂಗಳನ್ನು ಟೈಪಿಸಿ, ಛಂದಸ್ಸು, ಮಟ್ಟುಗಳನ್ನು ವಿದ್ವಾಂಸರಿಂದ ಪರಿಶೀಲಿಸಿ, ತಪ್ಪುಗಳನ್ನು ತಿದ್ದಿಸಿ ಅಪ್ಲೋಡ್ ಮಾಡಲಾಗುತ್ತದೆ. ಎರಡನೇಯದಾಗಿ ಪ್ರಸಂಗಪ್ರತಿಸಂಗ್ರಹ: ಪ್ರಸಂಗಪ್ರತಿಸಂಗ್ರಹದಲ್ಲಿ ಯಕ್ಷಗಾನ ಪ್ರಸಂಗ ಪ್ರತಿಗಳನ್ನು/ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತದೆ. ಆಂಡ್ರಾಯ್ಡ್ ಅಪ್ಲಿಕೇಶನ್‍ನಲ್ಲಿ ಯಕ್ಷಪ್ರಸಂಗಕೋಶ ಮತ್ತು ಪ್ರಸಂಗಪ್ರತಿಸಂಗ್ರಹ ಈ ಎರಡೂ ಯೋಜನೆಗಳ ಪ್ರತಿಗಳು ಸಿಗುತ್ತವೆ. ಎಲ್ಲಾ ಡಿಜಿಟಲ್ ಪ್ರಸಂಗ ಪ್ರತಿಗಳು ಉಚಿತ ಪ್ರಸಾರಕ್ಕಾಗಿಯೇ ಮೀಸಲಾಗಿವೆ.
Advertisement
Advertisement
ಪ್ರಸಂಗಪ್ರತಿಸಂಗ್ರಹದಲ್ಲಿ ಇಲ್ಲಿಯವರೆಗೂ ಒಟ್ಟು 600ಕ್ಕೂ ಹೆಚ್ಚು ಪ್ರಸಂಗಗಳನ್ನು ದಾಖಲಿಸಲಾಗಿದೆ. ಬರೀ ಪದಗಳು ಮಾತ್ರ ಸಿಗದೇ ಈ ಪ್ರಸಂಗ ಬರೆದ ಕವಿಗಳು ಪರಿಚಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕವಿಗಳ ಹೆಸರು, ಪ್ರಸಂಗವನ್ನು ಪ್ರಕಾಶಿಸಿದ ಸಂಸ್ಥೆಯ ಹೆಸರನ್ನು ಇಲ್ಲಿ ದಾಖಲಿಸಲಾಗುತ್ತದೆ. ಪ್ರಸಂಗಗಳು ಇನ್ನೂ ಪ್ರಕಾಶನವಾಗದೇ ಇದ್ದರೆ ಆ ಕವಿಯ ಹಸ್ತ ಪ್ರತಿಯ ಸ್ಕ್ಯಾನ್ ಸೇರಿಸಲಾಗುತ್ತದೆ.
ಯಾಕೆ ಈ ಯೋಜನೆ?
ಸುಮಾರು 8 ಸಾವಿರ ಯಕ್ಷಗಾನ ಪ್ರಸಂಗಗಳು ಬರೆದು ಹೋಗಿರುವ ಅಖಿಲ ಕರ್ನಾಟಕ ಸಮಗ್ರ (ಎಲ್ಲಾ ಪಾಯಗಳು ಸೇರಿ) ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಅರ್ಧದಷ್ಟು ಸಂಗ್ರಹವಿಲ್ಲದೇ ಯಾ ಸಂಗ್ರಹದ ಮಾಹಿತಿ ಇಲ್ಲದೇ ನಶಿಸಿ ಹೋಗಿರುವ ಸಾಧ್ಯತೆಗಳಿವೆ. ಉಳಿದ ಸುಮಾರು 4 ಸಾವಿರ ಪ್ರಸಂಗಗಳು ಬೇರೆ ಬೇರೆ ಸಂಗ್ರಹಗಳಲ್ಲಿ ಚದುರಿ ಹೋಗಿ ಎಲ್ಲವೂ ಒಂದೇ ಸಂಗ್ರಹದಿಂದ ವಿದ್ಯುನ್ಮಾನ ಪ್ರತಿಗಳನ್ನಾಗಿ (ಸ್ಕ್ಯಾನ್ ಪ್ರತಿಗಳನ್ನಾಗಿ) ಕೊಡುತ್ತಾ ಹೋಗುವುದಲ್ಲದೇ, ವಿದ್ಯುನ್ಮಾನ ಪ್ರತಿಗಳ ರೂಪದಲ್ಲಿ ಉಳಿದು ಹೋಗಿರುವುದನ್ನು ಕಾಲಗರ್ಭದಲ್ಲಿ ನಶಿಸಿಹೋಗದಂತೆ ಕಾಪಿಡುವುದು ನಮ್ಮ ಗುರಿ ಎಂದು ಯಕ್ಷವಾಹಿನಿ ಸಂಸ್ಥೆ ಹೇಳಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಯಕ್ಷ ಪ್ರೇಮಿ ಟೆಕ್ಕಿಗಳ ಕ್ರಿಯಾಶೀಲತೆಯನ್ನು ನೋಡಿ ನಟರಾಜ ಉಪಾಧ್ಯ ಅವರು ಅಂತರ್ಜಾಲದ ಮೂಲಕ ಯಕ್ಷಗಾನದ ದಾಖಲಿಕರಣದ ಕೆಲಸಗಳಲ್ಲಿ ಉಳಿದ ಹೋಗಿರುವ ಕೆಲಸ ಮಾಡಲು ಸ್ವಯಂಸೇವಕರ ತಂಡವನ್ನು ಕಟ್ಟುವ ಪ್ರಸ್ತಾವನೆ ಮಾಡಿದರು. ಈ ಯೋಜನೆಗೆ ರವಿ ಮಡೋಡಿ, ಆನಂದರಾಮ ಉಪಾಧ್ಯ, ಡಾ. ಪ್ರದೀಪ್ ಸಾಮಗ, ಎಂ.ಎಲ್. ಸಾಮಗ, ಲ.ನಾ. ಭಟ್, ಕಜೆ ಸುಬ್ರಹ್ಮಣ್ಯ ಭಟ್, ದಿನೇಶ ಉಪ್ಪೂರ, ರಾಜಗೋಪಾಲ ಕನ್ಯಾನ, ಅಶ್ವಿನಿ ಹೊದಲ, ಶಶಿರಾಜ ಸೋಮಯಾಜಿ, ಅವಿನಾಶ್ ಬೈಪಡಿತ್ತಾಯ, ಅಶೋಕ ಮುಂಗಳೀಮನೆ, ವಸುಮತಿ ಮುಂತಾದ 25 ಕ್ಕೂ ಹೆಚ್ಚಿನ ಯಕ್ಷ ಪ್ರೇಮಿಗಳು ಕೈ ಜೋಡಿಸಿದರು. ಈ ತಂಡವನ್ನು ಶ್ರೀ ಡಿ.ಎಸ್. ಶ್ರೀಧರ ಮತ್ತು ಶ್ರೀ ಗಿಂಡೀಮನೆ ಮೃತ್ಯುಂಜಯ ಅವರು ಯಕ್ಷಗಾನ ಛಂದಸ್ಸಿನ ಕುರಿತಾದ ತಪ್ಪುಗಳನ್ನು ತಿದ್ದುವತ್ತ, ಆಚಾರ್ಯ ಸ್ಥಾನದಲ್ಲಿ ನಿಂತು ಮುನ್ನಡೆಸಿದರು. ಇನ್ನು ಆನೇಕ ಯಕ್ಷಗಾನದ ಕಲಾವಿದರು, ಪ್ರಸಂಗ ಕವಿಗಳು, ಪ್ರಸಂಗ ಸಂಗ್ರಹಕಾರರು ಮತ್ತು ಟೆಕ್ಕಿಗಳ ಸೇರುತ್ತಾ ಸುಮಾರು 100 ಮಂದಿ ಸ್ವಯಂ ಸೇವಕರ ತಂಡ ಈಗ ಈ ಯೋಜನೆಗೆ ಸಹಕಾರ ನೀಡುತ್ತಿದೆ.
ಯಾವುದೇ ಆರ್ಥಿಕ ಲಾಭದ ಉದ್ದೇಶ ಇಲ್ಲದ ಈ ಯೋಜನೆಗೆ ಅನೇಕ ಪ್ರಸಂಗ ಕವಿಗಳು, ಪ್ರಕಾಶಕರು ಸಮ್ಮತಿ ನೀಡಿ ಹರಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರು ಪ್ರಸಂಗದ ಡಿಜಿಟಲೀಕರಕ್ಕೆ ಮುಂದಾಗಿದ್ದು, ಯಕ್ಷವಾಹಿನಿಯ ಸಹಯೋಗವನ್ನು ಪಡೆಯುತ್ತಿದ್ದಾರೆ. ಈ ಕುರಿತಾಗಿ ಅಕಾಡೆಮಿಯು ಸಂಸ್ಥೆಗೆ ನೀಡುವ ಪ್ರೋತ್ಸಾಹ ಧನದಲ್ಲಿ ಸಿಂಹಪಾಲನ್ನು ಸಮಕಾಲೀನ ಕವಿಗಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.
ಪ್ರಸಂಗ ಪ್ರತಿ ಸಂಗ್ರಹ ಹೆಚ್ಚಿಸಲು ಸಾಮೂಹಿಕ ಸ್ಕ್ಯಾನಿಂಗ್ ಕಮ್ಮಟಗಳನ್ನು ಯಕ್ಷವಾಹಿನಿಯು ಆಯೋಜಿಸುತ್ತಿದೆ. ಯಕ್ಷ ಪ್ರಸಂಗ ಕೋಶಕ್ಕಾಗಿ ಆನೇಕ ಸ್ವಯಂಸೇವಕರು ಕಂಪ್ಯೂಟರಿನಲ್ಲಿ ಟೈಪಿಸಿ ಪ್ರಸಂಗಗಳನ್ನು ಕಳುಹಿಸುತ್ತಿದ್ದಾರೆ.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ನಟರಾಜ ಉಪಾಧ್ಯ ಅವರು, ಯಕ್ಷಗಾನ ಮಟ್ಟುಗಳ ಯಾದಿಯನ್ನು ತಯಾರಿಸಿ, ಎಲ್ಲಾ ಪಾಯಗಳಲ್ಲಿ ಛಂದಸ್ಸಿಗೆ ಅನುಗುಣವಾದ ಈ ಮಟ್ಟುಗಳನ್ನು ಹಾಡುವ ಶೈಲಿಗಳ ವೈವಿಧ್ಯವನ್ನು ಆಡಿಯೋ, ವಿಡಿಯೋ ದಾಖಲೆ ಮಾಡಬೇಕು ಎನ್ನುವ ಚಿಂತನೆ ಇದೆ. ಇದರ ಜೊತೆಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಸಂಘ ಸಂಸ್ಥೆಗಳ ಮಾಹಿತಿಯ ಪಟ್ಟಿಯನ್ನು ಹೊರತರಲು ಉತ್ಸುಕರಾಗಿದ್ದೇವೆ. ಮೂರು ವರ್ಷಗಳ ಹಿಂದೆಯೇ ಪ್ರಕಟಿಸಿದ 5 ಸಾವಿರಕ್ಕೂ ಮಿಕ್ಕಿದ ಯಕ್ಷ ಪ್ರಸಂಗಗಳ ಯಾದಿಯನ್ನು ಮತ್ತಷ್ಟು ಪರಿಷ್ಕರಿಸಿ 6 ಸಾವಿರಕ್ಕೆ ಏರಿಸಲು ಹೊರಟಿದ್ದೇವೆ, ಅಲ್ಲದೇ ಎಲ್ಲಾ ಯಕ್ಷಗಾನಕ್ಕೆ ಕುರಿತಾದ ಪುಸ್ತಕಗಳ ಯಾದಿಯನ್ನೂ ತಯಾರಿಸಬೇಕಾಗಿದೆ ಎಂದು ತಿಳಿಸಿದರು.
ಈ ಯೋಜನೆಗಳನ್ನು ಮತ್ತಷ್ಟು ತ್ವರಿತಗೊಳಿಸಲು ಸ್ವಯಂಸೇವಕರ ಶ್ರಮದಾನ ಹಾಗೂ ದಾನಿಗಳಿಂದ ಧನ ಸಹಾಯ ಬೇಕಾಗುತ್ತದೆ. ಕಲಾಸಕ್ತರು [email protected] ಮೂಲಕ ಸಂಸ್ಥೆಯನ್ನು ಸಂಪರ್ಕಿಸಬಹುದು. ನಟರಾಜ ಉಪಾಧ್ಯ ಮೊಬೈಲ್ ನಂ 96328 24391.
ಪ್ರಸಂಗಪ್ರತಿಸಂಗ್ರಹ: www.prasangaprathisangraha.com
ಯಕ್ಷಪ್ರಸಂಗಕೋಶ: www.yakshaprasangakosha.com
ಪ್ರಸಂಗಪ್ರತಿಸಂಗ್ರಹ ಆಪ್ ನ ಕೊಂಡಿ : prasanga.prati.sangraha