ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ನ್ಯೂಮೋನಿಯಾ ಹಾಗೂ ಪಾಶ್ರ್ವ ವಾಯುವಿನಿಂದ ಬಳಲುತ್ತಿರುವ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆ.25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.
Advertisement
ಆದರೆ ಸೆ.25ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಅವರಿಗೆ ಮೊದಲು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸೆ.29ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.
Advertisement
ಕೆಎಂಸಿಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು ಹಿರಿಯ ಕಲಾವಿದರ ಆರೋಗ್ಯದ ಬಗ್ಗೆ ನಿಗಾ ವಹಿಸಿರುವುದಾಗಿ ಚಿಟ್ಟಾಣಿ ಕುಟುಂಬಸ್ಥರು ತಿಳಿಸಿದ್ದಾರೆ.