ಮಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಯೋಜನೆಗೊಂಡಿತ್ತು. ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರ ನಿರ್ವಹಿಸುತ್ತಿದ್ದರು. ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ಸನ್ನಿವೇಶ ಬಂದಾಗ ಶೆಟ್ಟರು ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
Advertisement
ಕಟೀಲು ಮೇಳವೊಂದರಲ್ಲೇ ಸುದೀರ್ಘ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಮೂರನೇ ಮೇಳದ ಮ್ಯಾನೇಜರ್ ಆಗಿದ್ದರು. ದೇವಿ ಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಗಂಗಯ್ಯ ಶೆಟ್ಟರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
Advertisement
Advertisement
15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ವೈದ್ಯರ ಸಲಹೆಯಂತೆ ಅವರು ಮಹಿಷಾಸುರನ ಪಾತ್ರವನ್ನು ಮಾಡುತ್ತಿರಲಿಲ್ಲ. ಅರುಣಾಸುರ, ರಕ್ತಬೀಜ, ರುದ್ರಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಅಪರೂಪಕ್ಕೊಮ್ಮೆ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಯಕ್ಷಮಿತ್ರರು, ದುಬೈ ಇವರ ವತಿಯಿಂದ ದುಬೈಯಲ್ಲಿ ಜರಗಿದ್ದ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರ ಮಾಡಿದ್ದರು.
Advertisement
ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು. ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು ಎಂದು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ.
ಧರ್ಮಪತ್ನಿ, ಸುಪುತ್ರರಾದ ಶಶಿಕಾಂತ, ಮುಕೇಶ್ ಹಾಗೂ ಶ್ರೀನಿಧಿ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಗಂಗಯ್ಯ ಶೆಟ್ಟರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಂಗಸ್ಥಳದಲ್ಲೇ ನಿಧನರಾದ ಕಲಾವಿದರು: ಈ ಹಿಂದೆ ಇದೇ ರೀತಿಯಲ್ಲಿ ಮೇರು ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭುಹೆಗಡೆ, ದಾಮೋದರ ಮಂಡೆಚ್ಚ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್, ಅರುವ ನಾರಾಯಣ ಶೆಟ್ಟಿ, ಅಶೋಕ ಕೊಲೆಕಾಡಿ ಅವರಂತಹ ದಿಗ್ಗಜ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ವೇಳೆ ರಂಗದಲ್ಲೇ ಮೃತಪಟ್ಟಿದ್ದರು.
ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಲನಾ ಭಟ್ ಅವರು ಗಂಗಯ್ಯ ಶೆಟ್ಟರನ್ನು ಈ ರೀತಿಯಾಗಿ ನೆನಪುಮಾಡಿಕೊಳ್ಳುತ್ತಾರೆ
ಕೊನೆಗೂ ಪಾತ್ರವನ್ನು ಬಿಟ್ಟು ಕೊಡದ ಶೆಟ್ಟರು.
ಬಂಡೆಗಲ್ಲಿಗೆ ಅರುಣಾಸುರ ಖಡ್ಗದಿಂದ ಬಡಿದಾಗ ಬಂಡೆಯೊಡೆದು ಚಿಮ್ಮುವ ವಜ್ರದುಂಬಿ, ಮತ್ತೆ ಸಭೆಯಲ್ಲಿ ಅರುಣಾಸುರ ಓಡುವ ಸನ್ನಿವೇಶ. ಕಲ್ಲಿಗೆ ಹೊಡೆದು ಭ್ರಾಮರಿಯನ್ನು ಸಾಕ್ಷಾತ್ಕರಿಸಿದ ಶೆಟ್ಟರ ಅರುಣ ಕುಸಿದು ಬಿದ್ದಿದ್ದ. ರಂಗದಲ್ಲಿ ರಾರಾಜಿಸಿದ್ದ ಖಳಪಾತ್ರಗಳ ದೊರೆ ತನ್ನ ಕೊನೆಯ ಪಾತ್ರವನ್ನೂ ಬಿಟ್ಟುಕೊಡದೆ ಮುಗಿಸಿಯೇ ಹೋಗಿದ್ದ. ಕನ್ನಡದ ಚಿತ್ರರಂಗಕ್ಕೆ ಖಳನಾಯಕ ವಜ್ರಮುನಿಯಾದರೆ ನನ್ನ ಮಟ್ಟಿಗೆ ಪೌರಾಣಿಕ ಪ್ರಸಂಗಗಳ ಯಕ್ಷಗಾನದ ಖಳನಾಯಕ ಗಂಗಯ್ಯ ಶೆಟ್ಟರು.
ಚಿಕ್ಕಂದಿನಲ್ಲಿ ನಮ್ಮ ಊರಿಗೆ ಕಟೀಲು ಮೇಳ ಬಂದಿದ್ದಾಗ ಗಂಗಯ್ಯ ಶೆಟ್ಟರನ್ನು ಮೊದಲು ನೋಡಿದ ನೆನಪು, ನಾಟಕೀಯ ವೇಷಗಳಲ್ಲಿ ದೃಢಕಾಯರಾದ ಶೆಟ್ಟರು ಭೀಮಕಾಯರಾಗುತ್ತಿದ್ದರು, ಅವರ ವೇಷವನ್ನು ಚೌಕಿಯಲ್ಲಿ ಹತ್ತಿರದಿಂದ ನೋಡುವ ಸೊಗಸೇ ಬೇರೆ. ಬಣ್ಣಗಳನ್ನು ಅದ್ಭುತವಾಗಿ ಬಳಸಿ ಖಳಪಾತ್ರದ ಛಾಯೆ ಮುಖದಲ್ಲಿ ಎದ್ದು ಕಾಣುವಂತೆ ಬರೆಯುತ್ತಿದ್ದರು. ಶೆಟ್ಟರು ವೇಷಧರಿಸಿದ ಬಳಿಕ ನಡೆಯುತ್ತಿದ್ದ ಶೈಲಿಯೂ ಆಕರ್ಶಕ. ಹಿರಣ್ಯಕಶ್ಯಪನ ಪಾತ್ರ ಶೆಟ್ಟರ ಅದ್ಭುತ ಪಾತ್ರಗಳಲ್ಲೊಂದು, ಅದನ್ನು ನೋಡಿದ ನೆನಪಿದೆ. ಪ್ರಹ್ಲಾದನ ಮೇಲೆ ಒಮ್ಮೆ ಉಕ್ಕುವ ಮಮತೆ, ಮತ್ತೆ ಅರೆಕ್ಷಣದಲ್ಲಿ ಹುಟ್ಟಿಕೊಳ್ಳುವ ಹರಿದ್ವೇಷವನ್ನು ಅವರು ತೋರಿಸುತ್ತಿದ್ದ ಪರಿ ಅನನ್ಯ, ಅದನ್ನು ಇನ್ನು ಕಾಣುವುದಕ್ಕಿಲ್ಲ.
ಇಂದು ಬೆಳಗ್ಗೆ ವಾಟ್ಸಾಪ್ ತೆರೆದು ನೋಡಿದಾಗ ಕಂಡದ್ದು ಮಹಾನ್ ಕಲಾವಿದನ ಕೊನೆಯ ವೇಷದ ಸುದ್ದಿ, ಕ್ಷಣಮಾತ್ರ ಕಣ್ಣು ಮಂಜಾಯ್ತು. ಛೇ ಇನ್ನವರ ವೇಷ ನೋಡುವ ಭಾಗ್ಯ ಇಲ್ಲವಲ್ಲ ಅನ್ನಿಸಿತು. ಗಂಗಯ್ಯ ಶೆಟ್ಟರ ರುದ್ರಭೀಮನ ವಿಡಿಯೋ ಸಿಡಿ ನಾನು ಹೈಸ್ಕೂಲ್ ಮುಗಿಸುವ ಸಂದರ್ಭದಲ್ಲಿ ಹೊರಬಂದಿತ್ತು, ಅದನ್ನು ಎಷ್ಟು ಬಾರಿ ನೋಡಿದ್ದೇನೋ ನನಗೇ ಗೊತ್ತಿಲ್ಲ. ನಮ್ಮ ಕಾಲದ ರುದ್ರಭೀಮ ಎಂದರೆ ಗಂಗಯ್ಯ ಶೆಟ್ಟರದ್ದು ಎನ್ನುವ ಭಾವನೆ ಇವತ್ತಿಗೂ ಜೀವಂತವಾಗಿದೆ.
ಅನೇಕ ಕ್ಯಾಸೆಟ್ ಗಳಲ್ಲಿ ಅವರ ಧ್ವನಿಯನ್ನಾಲಿಸಿದ್ದೇನೆ. ಚಂದಗೋಪ, ವಿದ್ಯುನ್ಮಾಲಿ,ಅರುಣಾಸುರ, ಬಣ್ಣದವೇಷ ಇತ್ಯಾದಿ ವೇಷಗಳನ್ನು ನೋಡಿದ್ದೇನೆ. ನೇರವಾಗಿ ಅವರ ವೇಷ ನೋಡಿದ್ದಕ್ಕಿಂತ ಹೆಚ್ಚು ಸಿಡಿಗಳಲ್ಲೇ ನೋಡಿದ್ದು,ಅನುಭವಿಸಿದ್ದು ಹೆಚ್ಚು. ಪಾತ್ರಗಳ ಮನೋಧರ್ಮವನ್ನರಿತುಕೊಂಡು ಸ್ವಭಾವ ಮತ್ತು ಭಾವನೆಯನ್ನು ವ್ಯಕ್ತಪಡಿಸಿ ಅದ್ಭುತವಾದ ವಾತಾವರಣ ಸೃಷ್ಟಿಸುತ್ತಿದ್ದ ವಿರಳ ಕಲಾವಿದರವರು. ಅವರ ವೇಷ ರಂಗದಲ್ಲಿ ಇದ್ದಷ್ಟು ಹೊತ್ತು ಪಾತ್ರವೇ ಆಗಿರುತ್ತಿತ್ತು ಹೊರತು ಗಂಗಯ್ಯ ಶೆಟ್ಟರು ಎಂದೂ ಕಾಣಿಸುತ್ತಿರಲಿಲ್ಲ. ಪರಂಪರೆಯ ಬಣ್ಣದವೇಷದ ಹಳೆ ತಲೆಮಾರಿನ ಕೊಂಡಿಯೊಂದು ಕಳಚಿದೆ. ಅಗಲಿದ ದಿವ್ಯಾತ್ಮಕ್ಕೆ ದೇವಿ ಭ್ರಾಮರಿ ಚಿರಶಾಂತಿಯನ್ನು ಕರುಣಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ.
ಇಲ್ಲಿ ಗಂಗಯ್ಯ ಶೆಟ್ಟಿಯವರು ವೇದಿಕೆಯಲ್ಲಿ ಕುಸಿದು ಬೀಳುತ್ತಿರುವ ವಿಡಿಯೋ ಮತ್ತು ಈ ಹಿಂದೆ ಅವರ ನಿರ್ವಹಿಸಿದ ರುದ್ರಭೀಮ ಪಾತ್ರದ ವಿಡಿಯೋವನ್ನು ನೀಡಲಾಗಿದೆ.
ವಿಡಿಯೋ ಕೃಪೆ. ಕೆಆರ್ ಕೆ ಭಟ್