– ಸಂಸದರಾಗಿ ದಸರಾಗೆ ಸಾಕ್ಷಿಯಾಗಿದ್ದ ಶ್ರೀಕಂಠದತ್ತ ಒಡೆಯರ್
– ಮೂರು ವರ್ಷ ಖಾಸಗಿ ದರ್ಬಾರ್ ನಡೆಸಲು ನಿರಾಕರಿಸಿದ್ದ ಜಯಚಾಮರಾಜ ಒಡೆಯರ್
ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಅ.3 ರಂದು ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು, ಮೇಳಗಳು ನಡೆಯುತ್ತಿವೆ. ಇದೇ ಅ.12 ರಂದು ಜಂಬೂಸವಾರಿ ನಡೆಯಲಿದೆ. ದಸರಾ ವೈಭವವನ್ನು ನೋಡಲು ದೇಶ-ವಿದೇಶಗಳಿಂದ ಜನರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಅರಮನೆ, ರಾಜಮನೆತನವೇ ಕೇಂದ್ರವಾಗಿರುವ ಮೈಸೂರು ದಸರಾ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ವಿಶೇಷವಾದದ್ದು. ರಾಜನಾಗಿಯೂ, ಜನಪ್ರತಿನಿಧಿಯಾಗಿಯೂ ಎರಡು ಗುರುತರ ಜವಾಬ್ದಾರಿಗಳೊಂದಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಪಾಲಿಗೆ ವಿಶೇಷ.
ಹಾಗಂತ ಇದೇನು ಹೊಸದಲ್ಲ. ಈ ಪರಂಪರೆಗೂ ಹಿನ್ನೆಲೆ ಇದೆ. ಮೈಸೂರು ಒಡೆಯರಿಗೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ ಇದೆ. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಮತ್ತು ಅವರ ಪುತ್ರ ಶ್ರೀಕಂಠದತ್ತ ಚಾಮರಾಜ ಒಡೆಯರ್ ಕೂಡ ಜನಪ್ರತಿನಿಧಿಗಳೂ ಆಗಿ ದಸರಾಗೆ ಸಾಕ್ಷಿಯಾಗಿದ್ದರು. ಆ ಪರಂಪರೆಯನ್ನು ಯದುವೀರ್ ಅವರು ಮುಂದುವರಿಸಿದ್ದಾರೆ.
Advertisement
Advertisement
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರು ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ 32ರ ಹರೆಯದ ಯುವರಾಜ 1,39,262 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು. ಈಗ ಸಂಸದರಾಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಯದುವೀರ್ ಅವರು ಶ್ರೀಕಂಠದತ್ತ ಅವರಂತೆಯೇ ಮೊದಲ ಯತ್ನದಲ್ಲೇ ಲೋಕಸಭೆ ಪ್ರವೇಶಿಸಿದ್ದಾರೆ. ಇದಾದ ಕೆಲ ತಿಂಗಳಲ್ಲೇ ರಾಜ ಹಾಗೂ ಜನಪ್ರತಿನಿಧಿಯೂ ಆಗಿ ದಸರಾದಲ್ಲಿ ಪಾಲ್ಗೊಳ್ಳುವ ಸೌಭಾಗ್ಯವೂ ಯದುವೀರ್ ಅವರಿಗೆ ಲಭಿಸಿದೆ.
Advertisement
10ನೇ ಖಾಸಗಿ ದರ್ಬಾರ್ ನಡೆಸಿದ ಯದುವೀರ್
ಮೈಸೂರು ಅರಮನೆಯ ದರ್ಬಾರ್ ಅಂಗಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಗುರುವಾರ ರಾಜವಂಶಸ್ಥ ಯದುವೀರ್ ಒಡೆಯರ್ 10ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಿದರು. ಸಂಸದರಾದ ಬಳಿಕ ಇದೇ ಮೊದಲ ದರ್ಬಾರ್ ಆಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯಲ್ಲಿ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ಪಾಲ್ಗೊಂಡಿದ್ದರು.
Advertisement
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
1974ರಲ್ಲಿ ತಂದೆ ಚಾಮರಾಜ ಒಡೆಯರ್ ಮರಣ ನಂತರ ಶ್ರೀಕಂಠದತ್ತ ಚಾಮರಾಜ ಒಡೆಯರ್ ಅವರು ಯದುವಂಶದ ಮುಖ್ಯಸ್ಥರಾದರು. 1974ರಿಂದ 2013ರ ವರೆಗೂ ಮೈಸೂರು ದಸರಾ ಸೇರಿದಂತೆ ರಾಜಮನೆತನದ ಸಾಂಪ್ರದಾಯಿಕ ಪದ್ಧತಿಗಳನ್ನು ಮುಂದುವರಿಸಿದರು. ಶ್ರೀಕಂಠದತ್ತರು ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಸದಸ್ಯರಾಗಿದ್ದರು. 1984ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸದರಾದರು. ಹೀಗೆ ನಾಲ್ಕು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಸಂಸದರಾಗಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದರು.
ಜಯಚಾಮರಾಜ ಒಡೆಯರ್
ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್. ಇವರು 1940ರಿಂದ 1950ರ ವರೆಗೂ ರಾಜ್ಯಬಾರ ನಡೆಸಿದರು. 1950ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ 1956ರ ವರೆಗೂ ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ 1964 ರ ವರೆಗೂ ರಾಜ್ಯಪಾಲರಾಗಿದ್ದರು. ರಾಜ್ಯ ರಾಜಕೀಯ ವ್ಯವಸ್ಥೆಯಲ್ಲಿದ್ದುಕೊಂಡು ಚಾಮರಾಜ ಒಡೆಯರ್ ರಾಜಮನೆತನದ ಸಾಂಪ್ರದಾಯಿಕ ಪದ್ಧತಿಗಳನ್ನು ಮುಂದುವರಿಸಿದ್ದರು. ಈ ಅವಧಿಯಲ್ಲಿ ಮೈಸೂರು ದಸರಾಗೆ ಸಾಕ್ಷಿಯಾಗಿದ್ದರು.
ಖಾಸಗಿ ದರ್ಬಾರ್ ತಿರಸ್ಕರಿಸಿದ್ದ ಮಹಾರಾಜ
1970ರಲ್ಲಿ ಅಂದಿನ ಸರ್ಕಾರ ಮಹಾರಾಜ ಚಾಮರಾಜ ಒಡೆಯರ್ ಅವರಿಗಿದ್ದ ಅಧಿಕಾರ ಮೊಟಕುಗೊಳಿಸಿತ್ತು. ಇದರಿಂದ ಬೇಸರಗೊಂಡಿದ್ದ ಒಡೆಯರ್ 1971ರಲ್ಲಿ ದಸರಾ ಮಹೋತ್ಸವದಲ್ಲಿ ಖಾಸಗಿ ದರ್ಬಾರ್ ನಡೆಸದಿರಲು ತೀರ್ಮಾನಿಸಿದ್ದರು. 1971ರಿಂದ 73 ರ ವರೆಗೂ ರಾಜರು ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಈ ಅವಧಿಯಲ್ಲಿ ಸಿಂಹಾಸನದ ಮೇಲೆ ಪಟ್ಟದ ಕತ್ತಿ ಇಟ್ಟು ಖಾಸಗಿ ದರ್ಬಾರ್ ನಡೆಸಲಾಗಿತ್ತು. ಜಯಚಾಮರಾಜ ಒಡೆಯರ್ ನಿಧನರಾದ ಬಳಿಕ, ಯುವರಾಜನಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪ್ರತಿ ವರ್ಷ ಖಾಸಗಿ ದರ್ಬಾರ್ ನಡೆಸಿದರು.