ತುಮಕೂರು: ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಕಾಯಕಯೋಗಿ ಸಿದ್ದಗಂಗಾ ಶ್ರೀಗಳನ್ನು ಇಂದು ಬೆಳಗಿನ ಜಾವ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಮೈಸೂರಿನ ಮಹರಾಜ ಯದುವೀರ್ ಒಡೆಯರ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ನಾನು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದೆ. ಹಾಗೇ ಶ್ರೀಗಳನ್ನು ನೋಡಲು ಬಂದಿದ್ದೇನೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಅಂತ ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ. ಶ್ರೀಗಳು ವಿಶ್ರಾಂತಿಯಲ್ಲಿದ್ದರಿಂದ ಅವರನ್ನು ಎಚ್ಚರಿಸಲು ಹೋಗಲಿಲ್ಲ. ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರ ಆಶೀರ್ವಾದ ಪಡೆದುಕೊಂಡು, ಅವರನ್ನು ನೋಡಿಕೊಂಡು ಬಂದೆ” ಎಂದು ಹೇಳಿದರು.
ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಏರುಪೇರು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.
ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆ ಮಠದಲ್ಲೇ ಮುಂದುವರೆಸಿದ್ದೇವೆ. ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆಪರೇಷನ್ ಮಾಡಿದ ಗಾಯ ವಾಸಿಯಾಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv