ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಅಂಬಾರಿ ಆನೆ ಅರ್ಜುನ (Arjuna Elephant) ಸಾವಿಗೀಡಾಗಿತ್ತು. ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಗೌರವ ಸಲ್ಲಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಅಂಬಾರಿ ಆನೆ ಮೃತಪಟ್ಟಿತು. ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರುವ ಸಮಾಧಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅರ್ಜುನ ಸಮಾಧಿಗೆ ಯದುವೀರ್ ದಂಪತಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅರ್ಜುನನನ್ನು ಕಳೆದುಕೊಂಡಿದ್ದು ಮಗನನ್ನೇ ಕಳೆದುಕೊಂಡಂತಾಗಿದೆ: ಮಾವುತನ ಕಣ್ಣೀರು
ಡಿಸೆಂಬರ್ 5 ರಂದು ದಬ್ಬಳ್ಳಿಕಟ್ಟೆ ನಡೆತೋಪಿನಲ್ಲಿ ಮೈಸೂರು ಅರಮನೆಯ ಪುರೋಹಿತರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿತ್ತು. ಅಂತ್ಯಕ್ರಿಯೆ ವೇಳೆ ರಾಜವಂಶಸ್ಥ ಯದುವೀರ್ ಅರಮನೆಯಿಂದ ಪೂಜಾ ಸಾಮಗ್ರಿ, ಹಾರ, ಶಾಲು ಕೊಟ್ಟು ಕಳುಹಿಸಿದ್ದರು. ಆದರೆ ಅಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಗುರುವಾರ ಪತ್ನಿ ತ್ರಿಷಿಕಾ ಕುಮಾರಿ ಜೊತೆ ಆಗಮಿಸಿ ಯದುವೀರ್ ಪೂಜೆ ಮಾಡಿ ಅಂಬಾರಿ ಆನೆ ಅರ್ಜುನನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳು ಜೊತೆಯಲ್ಲಿದ್ದರು.
ಅರ್ಜುನನ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರಂಭಿಸಿದ್ದ ಕಾಡಾನೆ ಸೆರೆ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆಯನ್ನು 10 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿ ತಂಗಿದ್ದ 5 ಸಾಕಾನೆಗಳೊಂದಿಗೆ ಮಾವುತರು ಸಾಕಾನೆ ಶಿಬಿರಕ್ಕೆ ವಾಪಾಸಾಗಿದ್ದಾರೆ. ಅರ್ಜುನ ಇಲ್ಲದೇ ವಾಪಾಸಾಗಿದ್ದು, ಮಾವುತರಲ್ಲಿ ದುಃಖ ತರಿಸಿತ್ತು. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ