– ಯುವಕರ ಕಾರ್ಯಕ್ಕೆ ಜನರ ಮೆಚ್ಚುಗೆ
ಯಾದಗಿರಿ: ಕೊರೊನಾ ವೈರಸ್‍ನಿಂದಾಗಿ ಘೋಷಣೆಯಾಗಿರುವ ಲಾಕ್‍ಡೌನ್‍ನಿಂದಾಗಿ ಜನ ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಬಡವರಿಗೆ ನಿರ್ಗತಿಕರಿಗೆ ವಿವಿಧ ಸಂಘ ಸಂಸ್ಥೆಗಳು ಉಚಿತ ಊಟದ ವ್ಯವಸ್ಥೆ ಸಹ ಮಾಡಿವೆ. ಯಾದಗಿರಿಯ ಸತೀಶ್ ಕಂದಕೂರ ಅಭಿಮಾನಿಗಳ ಬಳಗ ಮತ್ತು ವೀರಶೈವ ಮಹಾಸಭಾದ ಕೆಲ ಯುವಕರು ಒಂದು ವಿಭಿನ್ನ ರೀತಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಒಂದು ಫೋನ್ ಕಾಲ್ ಮಾಡಿದ್ರೆ ಸಾಕು ಇದ್ದಲ್ಲಿಗೆ ಶುಚಿ ರುಚಿ ಊಟ ಹಾಗೂ ಶುದ್ಧ ಕುಡಿಯುವ ನೀರಿನ ಕೊಡುವ ವ್ಯವಸ್ಥೆಯನ್ನು ಯುವಕರು ಮಾಡಿದ್ದಾರೆ. ಕಳೆದ 25 ದಿನಗಳಿಂದ ಸಮಾಜ ಸೇವಕ ಸತೀಶ್ ಅಭಿಮಾನಿ ಬಳಗದ ಯುವಕರು ನಗರದ ಬಡವರಿಗೆ ಮೂರು ಹೊತ್ತು ಉಚಿತ ಊಟ ನೀಡುತ್ತಿದ್ದಾರೆ. ಇದರ ಜೊತೆ ಜಿಲ್ಲಾಧಿಕಾರಿ ಕಚೇರಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಯಾದಗಿರಿಯ ವಿವಿಧ ಕಚೇರಿಗಳಿಗೆ ಮಧ್ಯಾಹ್ನ ಸ್ವತಃ ಯುವಕರೇ ಊಟವನ್ನು ತಲುಪಿಸುತ್ತಾರೆ. ಆಹಾರ ತಯಾರಿಸುವಾಗ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಈ ಯುವ ಪಡೆ, ವಿವಿಧ ಇಲಾಖೆಗಳ ಸಿಬ್ಬಂದಿ ಕರೆ ಮಾಡಿ ಅವರ ಊಟದ ಬಗ್ಗೆ ವಿಚಾರಸಿ ಆಹಾರ ತಲುಪಲಿಸುವ ಕೆಲಸ ಮಾಡುತ್ತಿದ್ದಾರೆ.
ಯುವಕರ ಈ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುತ್ತಿರುವ ಯುವಕರಿಗೆ ಅನೇಕರು ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ.