– ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಯಾದಗಿರಿ: ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಹಾಡಹಗಲೇ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಲಕ್ಷ್ಮೀ ನಗರದ ಬಡಾವಣೆಯ ಲಕ್ಷ್ಮೀ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಕಳ್ಳರ ಕೃತ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪದ್ಮಾವತಿ ಚನ್ನಪ್ಪ ಬೊರಡ್ಡಿ ಎಂಬವರ ಕೊರಳಲ್ಲಿದ್ದ 40 ಗ್ರಾಂ ಚಿನ್ನ ಕಳ್ಳತನವಾಗಿದ್ದು, ಇದರ ಮೌಲ್ಯ 1.40 ಲಕ್ಷ ರೂ. ಎಂದು ತಿಳಿದು ಬಂದಿದೆ.
ಪದ್ಮಾವತಿ ಅವರು ಪರಿಚಯವಿರುವ ಇಬ್ಬರು ಮಹಿಳೆಯರ ಜೊತೆಗೆ ಗುರುವಾರ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಮಾರ್ಕೆಟ್‍ಗೆ ತೆರಳುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಲಕ್ಷ್ಮೀ ದೇವಸ್ಥಾನದ ಬಳಿ ಪದ್ಮಾವತಿ ಅವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಎಳೆದ ರಭಸಕ್ಕೆ ಪದ್ಮವತಿ ಅವರು ನೆಲಕ್ಕೆ ಬಿದ್ದರೂ ನೋಡದೆ, ಸರವನ್ನ ದೋಚಿದ್ದಾರೆ. ಈ ಅಮಾನವೀಯ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೇರೆಯಾಗಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಪದ್ಮಾವತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.