Connect with us

Districts

ಯಾದಗಿರಿ ಜಿಲ್ಲಾಸ್ಪತ್ರೆಯ ಆವರಣದ ಶವಾಗಾರಕ್ಕೆ ಹೋಗಲು ಸೂಕ್ತ ದಾರಿಯೇ ಇಲ್ಲ!

Published

on

– ಶವ ಸಾಗಿಸದೇ ಎರಡು ಗಂಟೆ ತುರ್ತು ಚಿಕಿತ್ಸಾ ಘಟಕದಲ್ಲಿಯೇ ಇರಿಸಿದ ಸಿಬ್ಬಂದಿ

ಯಾದಗಿರಿ: ಜಿಲ್ಲಾಸ್ಪತ್ರೆಯ ಆವರಣದ ಶವಾಗಾರಕ್ಕೆ ಮೃತದೇಹ ಸಾಗಿಸಲು ದಾರಿ ಇಲ್ಲದೇ, ಎರಡು ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಶವವನ್ನು ಇಟ್ಟು ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿ ಮೆರೆದಿದ್ದಾರೆ.

ತುರ್ತು ಚಿಕಿತ್ಸಾ ಘಟಕದಲ್ಲಿ ಶವ ಇರಿಸಿದ್ದ ಪರಿಣಾಮ, ರೋಗಿಗಳು ಭಯದಿಂದಲೇ ಚಿಕಿತ್ಸೆ ಪಡೆದಿದ್ದಾರೆ. ಹಲವು ದಿನಗಳಿಂದ ಇದೇ ರೀತಿಯ ಅವ್ಯವಸ್ಥೆಯಿದ್ದರೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮಾತ್ರ, ಯಾವುದೇ ಕ್ರಮಕೈಗೊಳ್ಳದೇ ಕಾಲ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಏನಿದು ಪ್ರಕರಣ:
ಗುರುಮಠಕಲ್ ವಿಭಾಗದ ಬಸ್ ಚಾಲಕ ಪ್ರಕಾಶ್ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗ್ಗೆ 7 ಗಂಟೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿಯ ಮಧ್ಯದಲ್ಲಿ ಪ್ರಕಾಶ್ ಮೃತಪಟ್ಟಿದ್ದಾರೆ ಅಂತ ಜಿಲ್ಲಾಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಬಳಿಕ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಮುಂದಾಗಿದ್ದರು. ಈ ವೇಳೆ ಅಲ್ಲಿಗೆ ಹೋಗಲು ದಾರಿಯೇ ಇರಲಿಲ್ಲ. ಹೀಗಾಗಿ ಎರಡು ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶವಾಗಾರದ ದಾರಿಯಲ್ಲಿ ಕೊಳಚೆ ನಿಂತಿದೆ. ಜೊತೆಗೆ ಕಸ ಬೆಳೆದು, ಕಲ್ಲುಗಳು ಎಲ್ಲಂದರಲ್ಲಿ ಬಿದ್ದಿದ್ದು, ಒಬ್ಬ ವ್ಯಕ್ತಿ ಕೂಡಾ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮೃತದೇಹವನ್ನು ಸಾಗಿಸಲು ಕಷ್ಟವಾಗುತ್ತಿದ್ದು, ಸಿಬ್ಬಂದಿ ಮಾತ್ರ ಒಂದು ಪ್ಲಾಸ್ಟಿಕ್ ಸೀಟ್‍ನಲ್ಲಿ ಶವ ಸಾಗಿಸುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆ ನೌಕರರು ಆರೋಪಿಸಿದ್ದಾರೆ.

ಈ ಕುರಿತು ನಾವು ಪ್ರಶ್ನೆ ಮಾಡಿದರೂ, ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ನಮ್ಮ ಸಾರಿಗೆ ಬಸ್ಸಿನಲ್ಲೇ ಶವವನ್ನು ಮರಳಿ ತಗೆದುಕೊಂಡು ಹೋಗುತ್ತಿದ್ದೇವೆ. ಇಲ್ಲಿನ ಶಾಸಕರು ತಕ್ಷಣವೇ ಅವ್ಯವಸ್ಥೆಯ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Click to comment

Leave a Reply

Your email address will not be published. Required fields are marked *