– ಪ್ರಮುಖ ಜವಾಬ್ದಾರಿಗೆ ಶರಣಗೌಡ ಕಂದಕೂರು ರಾಜೀನಾಮೆ
ಯಾದಗಿರಿ: ವಿಧಾನಸಭೆ ಉಪಚುನಾವಣೆ ಫಲಿತಾಂಶದ ನಂತರ ಕೈ ಪಾಳಯದಲ್ಲಿ ಆರಂಭವಾಗಿದ್ದ ರಾಜೀನಾಮೆ ಪರ್ವ, ಈಗ ಜೆಡಿಎಸ್ನಲ್ಲಿಯೂ ಸಹ ಶುರುವಾಗಿದೆ. ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ ನೀಡಿದ್ದಾರೆ.
ಶರಣಗೌಡ ಕಂದಕೂರ ಅವರು ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಒಂದು ಸ್ಥಾನ ಗೆಲ್ಲದ ಹಿನ್ನೆಲೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್
Advertisement
Advertisement
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬಕ್ಕೆ ಆಪ್ತರಾಗಿರುವುದರಿಂದ ಶರಣಗೌಡ ಕಂದಕೂರ ಅವರಿಗೆ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಸದ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶರಣಗೌಡ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Advertisement
ಯಾರು ಈ ಶರಣಗೌಡ ಕಂದಕೂರ?
ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರನೇ ಶರಣಗೌಡ ಕಂದಕೂರು. ಫೆಬ್ರವರಿಯಲ್ಲಿ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪನವರು ಶರಣಗೌಡ ಸಂಪರ್ಕಿಸಿದ್ದರು ಎನ್ನಲಾದ ಆಡಿಯೋವನ್ನು ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ಆಡಿಯೋದಲ್ಲಿ 50 ಕೋಟಿ ರೂ. ಆಫರ್ ಮತ್ತು ಚುನಾವಣೆಯಲ್ಲಿ ಬೆಂಬಲದದ ಜೊತೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬ ಧ್ವನಿ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಅಡಿಯೋದಲ್ಲಿ ಹೇಳಲಾಗಿತ್ತು. ಅಂದು ಹೆಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಶರಣಗೌಡ ಕಂದಕೂರ ಉಪಸ್ಥಿತರಿದ್ದರು.