ಯಾದಗಿರಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಅತ್ತೆ ಸೊಸೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೈದಾಪುರ ಸಮೀಪದ ನಿಲ್ಲಹಳ್ಳಿ ಗೆಟ್ ಬಳಿ ನಡೆದಿದೆ.
ಯಾದಗಿರಿ ತಾಲೂಕಿನ ಲಾಡಾಪುರ್ ಗ್ರಾಮದ ನಿವಾಸಿಗಳಾದ ಮಹಾದೇವಮ್ಮ (50) ಪ್ರಿಯಾ (35) ಮೃತ ದುರ್ದೈವಿಗಳು. ಈ ದುರ್ಘಟನೆಯಲ್ಲಿ ಮಹೇಂದ್ರ ಮತ್ತು ಸಂಬಂಧಿ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹೇಂದ್ರ ಅವರು ತಮ್ಮ ಕುಟುಂಬದ ಜೊತೆಗೆ ಕಾರಿನಲ್ಲಿ ಯಾದಗಿರಿಯಿಂದ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಆದರೆ ವೇಗವಾಗಿದ್ದ ಕಾರು ಸೈದಾಪುರ ಸಮೀಪದ ನಿಲ್ಲಹಳ್ಳಿ ಗೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮಹಾದೇವಮ್ಮ ಹಾಗೂ ಪ್ರಿಯಾ ಮೃತಪಟ್ಟಿದ್ದಾರೆ.
ಕಾರು ಅಪಘಾತವನ್ನು ನೋಡಿದ ಕೆಲ ಜನರು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸೈದಾಪುರ ಠಾಣೆಯ ಪೊಲೀಸರು, ಗಾಯಾಳುಗಳನ್ನು ರಾಯಚೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅತಿಯಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.