ಯಾದಗಿರಿ: ತಂಗಿಯನ್ನು ನೋಡಲು ಬಂದವನಿಗೆ ಜ್ವರ ಬಂದು ಚಿಕಿತ್ಸೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹೃದಯವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಹೌದು. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 45 ಸಾವಿರ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಬಂದಿರುವುದರಿಂದ ನೀಲಕಂಠರಾಯನಗಡ್ಡಿ ಈಗ ನಡುಗಡ್ಡೆಯಾಗಿದೆ.
Advertisement
ನೀಲಕಂಠರಾಯನಗಡ್ಡಿ ಸುತ್ತಲು ಕೃಷ್ಣಾ ನದಿ ಒಡಲು ಮೈದುಂಬಿ ಹರಿಯುತ್ತಿದೆ. ಇಂದು ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಗಡ್ಡಿಯಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಂದ ಯುವಕ ಜ್ವರದಿಂದ ಬಳಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುಕಾಯಿ ಸಹಾಯದೊಂದಿಗೆ ಈಜಾಡಿ ಕೃಷ್ಣಾ ನದಿ ದಡ ಸೇರಲು ಹರಸಾಹಸ ಪಟ್ಟಿದ್ದಾರೆ.
Advertisement
ರಾಯಚೂರು ಜಿಲ್ಲೆಯ ಬಗಿರಗುಂಡ ಗ್ರಾಮದ ನಿವಾಸಿ ಹಣಮಂತ ಎಂಬವರು ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲಿ ಗಡ್ಡಿ ಸುತ್ತಲು ಕೃಷ್ಣ ನದಿ ನೀರು ಹರಿಸುವುದರಿಂದ ಚಿಕಿತ್ಸೆಗೆ ಪರದಾಡಿದ್ದಾರೆ. ನಂತರ ಇಂದು ಗ್ರಾಮಸ್ಥರ ಸಹಾಯದೊಂದಿಗೆ ಈಜಾಡುತ್ತಾ ದಡ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
Advertisement
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಗ್ರಾಮದಲ್ಲಿರುವ ಶಾಲೆಗೆ ಬೀಗ ಜಡಿಯಲಾಗಿದೆ. ಕಳೆದ 2 ದಿನಗಳಿಂದ ಗಡ್ಡಿ ಗ್ರಾಮಕ್ಕೆ ಶಿಕ್ಷಕರು ಬಂದಿಲ್ಲ. ಅದೆ ರೀತಿ ಗಡ್ಡಿಯಲ್ಲಿ ನಾಲ್ವರು ಗರ್ಭಿಣಿಯರಿದ್ದು ಆಸ್ಪತ್ರೆಗೆ ತೆರಳಲು ಪ್ರಯಾಸ ಪಡುವಂತಾಗಿದೆ. ಅದೆ ರೀತಿ ಗ್ರಾಮದಲ್ಲಿ ಆಹಾರ ಪದಾರ್ಥಕ್ಕೂ ಕೂಡ ಕೊರತೆಯುಂಟಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ಎಚ್ಚೆತ್ತು ದೋಣಿ ಅನುಕೂಲ ಕಲ್ಪಿಸಿ ಜನರ ಹಸಿವನ್ನು ನೀಗಿಸಬೇಕು ಹಾಗೂ ಗರ್ಭಿಣಿಯರಿಗೆ ಸೂಕ್ತ ಚಿಕೀತ್ಸೆ ನೀಡುವ ಕೆಲಸ ಮಾಡಬೇಕಿದೆ.
Advertisement