– ಗ್ರಾಮಸ್ಥರು ಒತ್ತಾಯಿಸಿದರೂ ಸರ್ಕಾರದ ನಿರ್ಲಕ್ಷ್ಯ
ಯಾದಗಿರಿ: ಇಲ್ಲಿಯ ಜನರು ಜೀವಕ್ಕೆ ಕಂಟಕವಾಗುವ ವಿಷಕಾರಿ ನೀರು ಸೇವಿಸುತ್ತಿದ್ದಾರೆ. ಜನರಿಗೆ ಶುದ್ಧ ನೀರನ್ನು ಪೂರೈಕೆ ಮಾಡಬೇಕಿರುವ ಸರ್ಕಾರವೇ ಯೋಗ್ಯವಲ್ಲದ ಅಪಾಯಕಾರಿ ನೀರು ಪೂರೈಕೆ ಮಾಡುತ್ತಿದೆ. ಕೇವಲ ಕಲುಷಿತ ನೀರಲ್ಲ ಆರ್ಸೆನಿಕ್ (Arsenic) ಹಾಗೂ ಫ್ಲೋರೈಡ್ (Fluoride) ಮಿಶ್ರಿತ ನೀರನ್ನು ಸೇವಿಸುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿರುವುದು ಜಿಲ್ಲೆಯ ಸುರುಪುರ (Surupura) ತಾಲೂಕಿನ ಕೀರದಳ್ಳಿ ತಾಂಡಾ ಗ್ರಾಮದಲ್ಲಿ.
ಕಳೆದ ಮೂರು ತಿಂಗಳಿನಿಂದ ವಿಷಕಾರಿ ನೀರನ್ನು ಸೇವಿಸುತ್ತಿದ್ದು, 12 ವರ್ಷಗಳ ಹಿಂದೆ ಆರ್ಸೆನಿಕ್ ಮುಕ್ತ ಮಾಡಲು ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಕೆ ಮಾಡಿತ್ತು. ಆದರೆ, ಶುದ್ಧ ಕುಡಿಯುವ ನೀರಿನ ಘಟಕ ಈಗ ಬಂದ್ ಆಗಿದೆ. ಜನರ ಆರೋಗ್ಯ ಕಾಪಾಡಬೇಕಾದ ನೀರು ಇದೀಗ ತಾಂಡಾದ ಜನರು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿದೆ. ಇದರಿಂದಾಗಿ ತಾಂಡಾದ ಜನರು ಬೋರ್‌ವೆಲ್‌ನೀರು ಸೇವಿಸುವಂತಾಗಿದೆ.ಇದನ್ನೂ ಓದಿ: ಪೇಜರ್ ಸ್ಫೋಟ ಬೆನ್ನಲ್ಲೇ ಚೀನಿ ಸಿಸಿಟಿವಿ ಬಳಕೆ ನಿಯಂತ್ರಿಸಲು ಮುಂದಾದ ಕೇಂದ್ರ
ತಾಲೂಕಿನ 19 ಗ್ರಾಮಗಳು ಆರ್ಸೆನಿಕ್ ಪೀಡಿತ ಗ್ರಾಮಗಳಾಗಿವೆ. ಇದನ್ನು ನಿವಾರಿಸಲು ಈ ಹಿಂದಿನ ಸರ್ಕಾರ ಅರ್ಸೆನಿಕ್ ಅಂಶವಿರುವ ನೀರು ಪೂರೈಕೆ ಮಾಡುವುದನ್ನು ಸ್ಥಗಿತ ಮಾಡಿತ್ತು. 12 ವರ್ಷಗಳ ಹಿಂದೆ ಜನರ ಆರೋಗ್ಯ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿತ್ತು. ಇದರಿಂದ ಜನರ ಆರೋಗ್ಯ ಕಾಪಾಡಲು ಅನುಕೂಲವಾಗಿತ್ತು. ಆದರೆ, ಈಗ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಬಂದ್ ಆಗಿದೆ.
ಗ್ರಾಮಕ್ಕೆ ಈಗ ಬೋರ್‌ವೆಲ್‌ನಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಿಲ್ಲವಂತೆ. ಅನಿವಾರ್ಯವಾಗಿ ತಾಂಡಾದ ಜನರು ವಿಷಕಾರಿ ನೀರು ಸೇವಿಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಎದುರಿಸುವಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಗ್ರಾಮದ ಜನರು ಒತ್ತಾಯಿಸಿದ್ದಾರೆ. ಆದರೆ ಜನರಿಗೆ ಶುದ್ಧ ನೀರು ಪೂರೈಕೆ ಮಾಡಬೇಕಾದ ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ, ಈ ತಾಂಡಾದಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿ ಕೈತೊಳೆದುಕೊಂಡಿದೆ. ಈಗಲಾದರೂ, ಸರ್ಕಾರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ ಜನರಿಗೆ ಶುದ್ಧ ಜೀವಜಲ ಪೂರೈಕೆ ಮಾಡಬೇಕಿದೆ.ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಗದ್ದಲ, ಮಾರಾಮಾರಿ- ಪರಸ್ಪರ ಕೈ ಮಿಲಾಯಿಸಿದ ಮುಖಂಡರು