– ಜಿಲ್ಲಾಡಳಿತದಿಂದ ಸನ್ಮಾನ
– ವಿದ್ಯಾರ್ಥಿನಿ ಮಾತಿಗೆ ಭಾವುಕರಾದ ಹಿರಿಯ ಅಧಿಕಾರಿಗಳು
ಯಾದಗಿರಿ: ತಂದೆಯ ಸಾವಿನ ದುಃಖದ ನಡುವೆಯೇ 10ನೇ ತರಗತಿ ಪರೀಕ್ಷೆ ಬರೆದು ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿನಿಯನ್ನು ಇಂದು ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಾಯಿತು.
Advertisement
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಡಿ.ದೇವರಾಜ ಅರಸುರವರ 106 ನೇ ಜನ್ಮದಿನಾಚರಣೆ ಇಂದು ನಡೆಯಿತು. ಕಾರ್ಯಕ್ರಮದಲ್ಲಿ 2020-21 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಗಳಲ್ಲಿದ್ದು, ಎಸ್.ಎಸ್.ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಬಾಲಕ, ಬಾಲಕಿಯರಿಗೆ ಸನ್ಮಾನಿಸಲಾಯಿತು.
Advertisement
Advertisement
ಈ ವೇಳೆ ಶಹಾಪುರ ತಾಲೂಕಿನ ಬೇವಿನಹಳ್ಳಿ ಕ್ರಾಸ್ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ದೀಪಿಕಾ ಎನ್ನುವ ವಿದ್ಯಾರ್ಥಿನಿಯು ತನ್ನ ತಂದೆಯ ಸಾವಿನ ದುಃಖದ ನಡುವೆ 10ನೇ ತರಗತಿ ವಾರ್ಷಿಕ ಪರೀಕ್ಷೆ ಬರೆದು 625 ಕ್ಕೆ 585 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
Advertisement
ಈ ಸಂದರ್ಭದಲ್ಲಿ ತನ್ನ ಅನಿಸಿಕೆ ವ್ಯಕ್ತಪಡಿಸಿದ ದೀಪಿಕಾ, ನನಗೆ ಕಷ್ಟ ಬಂದಾಗ ಜನ್ಮದಾತರನ್ನು ನೆನಪಿಸಿಕೊಳ್ಳುತ್ತಿದ್ದೆ. ಆದರೆ ಇಂದು ಸರ್ಕಾರವನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನನಗೆ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ವೈಯಕ್ತಿಕವಾಗಿ ಫೋನ್ ಮಾಡಿ ನಾವು ನಿನ್ನ ಜೊತೆಗಿದ್ದೇವೆ. ನೀನು ವಿದ್ಯಾಭ್ಯಾಸ ಮುಂದುವರಿಸು ಎಂದು ಧೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಭಾವುಕಳಾದಳು.
ವಿದ್ಯಾರ್ಥಿನಿ ಈ ರೀತಿ ಹೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ಇದ್ದವರೆಲ್ಲರೂ ಒಂದು ಕ್ಷಣ ಭಾವುಕರಾದರು.