ಯಾದಗಿರಿ: ಸುಗ್ಗಿ ಹಬ್ಬ ಸಂಕ್ರಾಂತಿ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತೆ. ಆದರೆ ಯಾದಗಿರಿಯಲ್ಲಿ ಮಾತ್ರ ಈ ಹಬ್ಬದ ಆಚರಣೆ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸುತ್ತಾರೆ. ಇಲ್ಲಿನ ಜನ ಸಂಕ್ರಾತಿ ಹಬ್ಬವನ್ನು ರೊಟ್ಟಿ ಹಬ್ಬ ಎಂದು ಕರೆಯುತ್ತಾರೆ.
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ಗ್ರಾಮದಲ್ಲಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅಬ್ಬೆತುಮಕೂರು ಗ್ರಾಮದಲ್ಲಿರುವ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಶ್ರೀ ಗಂಗಾಧರ ಸ್ವಾಮೀಜಿ ಈ ರೊಟ್ಟಿ ಹಬ್ಬದ ರೂವಾರಿ. ಪ್ರತಿ ವರ್ಷ ಸಂಕ್ರಾತಿ ಹಬ್ಬಕ್ಕೆಂದೇ ಐದಾರು ಟ್ರ್ಯಾಕ್ಟರ್ ಸಜ್ಜೆ ರೊಟ್ಟಿ ಮಾಡಿಸಿ, ಅವುಗಳನ್ನು ಸಂಕ್ರಾಂತಿಯ ಪುಣ್ಯ ಸ್ನಾನಕ್ಕೆಂದು ನದಿಗೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುತ್ತಾರೆ. ಹೀಗೆ ಶ್ರೀಗಳು ನೀಡುವ ಪ್ರಸಾದವನ್ನು ಭಕ್ತರು ಯಾವುದೇ ಜಾತಿ-ಮತ ಭೇದ ಭಾವವಿಲ್ಲದೆ ಸಾಮೂಹಿಕವಾಗಿ ರೊಟ್ಟಿ ಊಟ ಮಾಡುತ್ತಾರೆ.
ಇದಕ್ಕೂ ಮೊದಲು ಗಂಗಾಧರ ಸ್ವಾಮೀಜಿ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಹೀಗೆ ಸಂಕ್ರಾಂತಿಯಂದು ಇಲ್ಲಿಗೆ ಬಂದು ಭೀಮಾ ನದಿಯಲ್ಲಿ ಸ್ನಾನ ಮಾಡಿ ಶ್ರೀಗಳ ಆರ್ಶಿವಾದ ಪಡೆದು, ನಂತರ ಅವರು ನೀಡುವ ರೊಟ್ಟಿ ಊಟವನ್ನು ಸೇವಿಸಿದರೆ ಯಾವುದೇ ರೋಗಗಳು ಬರುವುದಿಲ್ಲ ಎಂಬ ಪ್ರತೀತಿ ಸಹ ಇಲ್ಲಿದೆ. ಹೀಗಾಗಿ ಈ ಹಬ್ಬದಂದು ಕಲಬುರುಗಿ, ರಾಯಚೂರು, ಬೀದರ ಸೇರಿದಂತೆ, ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಿಂದಲೂ ನೂರಾರು ಭಕ್ತರು ಇಲ್ಲಿಗೆ ಬಂದು ಈ ರೊಟ್ಟಿ ಹಬ್ಬದಲ್ಲಿ ಪಾಲ್ಗೊಳ್ಳುವುದು ಈ ಹಬ್ಬದ ಇನ್ನೊಂದು ವಿಶೇಷ.
ಅಬ್ಬೆ ತುಮಕೂರಿನಲ್ಲಿ ಸಂಕ್ರಾಂತಿ ದಿನದಂದು ನಡೆಯುವ ಈ ರೊಟ್ಟಿ ಹಬ್ಬ, ಧಾರ್ಮಿಕ ಆಚರಣೆಯ ಜೊತೆಗೆ ಜಾತ್ಯಾತೀೀತ ತತ್ವ ಸಾರುವ ಹಬ್ಬವಾಗಿ ಅಪಾರ ಸಂಖ್ಯೆಯ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv