ಯಾದಗಿರಿ: ಜಿಲ್ಲೆಯ ಒಂದು ಕಡೆ ಕೃಷ್ಣಾ ನದಿಯಿಂದ 6 ಲಕ್ಷ ಕ್ಯೂಸೆಕ್, ಮತ್ತೊಂದು ಕಡೆ ಭೀಮಾ ನದಿಯಿಂದ 2 ಲಕ್ಷ ಕ್ಯೂಸೆಕ್ ನೀರಿನಿಂದ ತುಂಬಿ ತುಳುಕಿ, ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದರು. ಆದರೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಇಂತಹ ಪ್ರವಾಹದ ವೇಳೆಯಲ್ಲೂ ಹನಿ- ಹನಿ ನೀರಿಗಾಗಿ ಜಿಲ್ಲೆಯ ಜನರು ಪರದಾಡುವಂತಾಗಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ಗೌಡೂರು, ಕೊಳ್ಳೊರು ಮತ್ತು ಯಕ್ಷಚಿಂತಿ ಗ್ರಾಮಗಳಲ್ಲಿ ಪ್ರವಾಹ ಆವರಿಸಿದೆ. ನೀರಿನಲ್ಲಿ ಮನೆ ಮುಳುಗಡೆಯಾದ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಗ್ರಾಮದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಅದೇ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳದಲ್ಲಿರುವ ಜನರಿಗೆ ಈಗ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ.
ಈ ಗ್ರಾಮಗಳಿಗೆ ಜಿಲ್ಲಾಡಳಿತ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ, ಕೇವಲ ಒಂದೆರೆಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ನೀರಿನ ಟ್ಯಾಂಕರ್ ಗಳ ಮುಂದೆ ಮಕ್ಕಳು, ಮಹಿಳೆಯರು, ವೃದ್ಧರು ಸಾಲು -ಸಾಲು ಕೊಡಗಳು ಹಿಡಿದು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ.
ಇಷ್ಟು ದಿನ ತೀವ್ರ ಬರಗಾಲದಿಂದ ತತ್ತರಿಸಿದ್ದ ಈ ಗ್ರಾಮಗಳ ಜನ, ತಮ್ಮ ಸುತ್ತಲೂ ಸಮುದ್ರದಂತೆ ನೀರು ಹರಿಯುತ್ತಿದ್ದರೂ ಅದನ್ನು ಬಳಸದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.