ಯಾದಗಿರಿ: ಕುತೂಹಲ ಮೂಡಿಸಿದ್ದ ಯಾದಗಿರಿಯ (Yadagiri) ಸುರಪುರ (Surpura) ತಾಲೂಕಿನ ಕೆಂಭಾವಿಯ (Kembhavi) ಆರ್‌ಎಸ್‌ಎಸ್ (RSS) ಪಥಸಂಚಲನ ಶಾಂತರೀತಿಯಲ್ಲಿ ಮುಕ್ತಾಯವಾಗಿದೆ. ಸುಮಾರು ಒಂದು ಸಾವಿರ ಗಣವೇಷಧಾರಿಗಳು ಶಾಂತಿ ಹಾಗೂ ಶಿಸ್ತಿನಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಥಸಂಚಲನ ಮಾಡಿದ್ದಾರೆ.
ಕೆಂಭಾವಿ ಪುರಸಭೆ ಕಚೇರಿಯ ಮುಂಭಾಗದಿಂದ ಆರಂಭವಾದ ಪಥಸಂಚಲನ ಪಟ್ಟಣದ ಬಸವೇಶ್ವರ ವೃತ್ತ, ಕಿತ್ತೂರು ಚೆನ್ನಮ್ಮ ಸರ್ಕಲ್, ಶ್ರೀರಾಮ ವೃತ್ತ, ಮಲಗಣ್ಣ ಚೌಕ್ ಮಾರ್ಗವಾಗಿ 4 ಕಿಮೀ ಸಾಗಿ ಪುನಃ ಪುರಸಭೆ ಕಚೇರಿಯ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ಸುಮಾರು 1 ಗಂಟೆ ಕಾಲ ಪಟ್ಟಣದಲ್ಲಿ ಪಥಸಂಚಲನ ನಡೆಯಿತು. ಭವ್ಯ ಪಥಸಂಚಲನ ಸ್ವಾಗತಿಸಲು ಎಲ್ಲಾ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಪುಷ್ಪ ಹಿಡಿದು ನಿಂತಿದ್ದರು. ಪಥಸಂಚಲನದುದ್ದಕ್ಕೂ ಗಣವೇಷಧಾರಿಗಳಿಗೆ ಪುಷ್ಪವೃಷ್ಠಿಯಾಯಿತು.
ಕೆಂಭಾವಿ ಪಟ್ಟಣದಲ್ಲಿ ಕೇಸರಿ ಬಾವುಟಗಳು ಹಾಗೂ ಬ್ಯಾನರ್ ರಾರಾಜಿಸುತ್ತಿದ್ದು, ಮಧುವಣಗಿತ್ತಿಯಂತೆ ಪಟ್ಟಣ ಕಂಗೊಳ್ಳಿಸುತ್ತಿತ್ತು. ಶಾಂತಿ ಸೌಹಾರ್ದತೆ ಕಾಪಾಡಲು ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಪಥಸಂಚಲನದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಗಣವೇಷಧಾರಿಗಳಾಗಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಪಥಸಂಚಲನಕ್ಕೂ ಮುನ್ನ ಮುನ್ನೆಚ್ಚರಿಕೆಯಾಗಿ 300ಕ್ಕೂ ಹೆಚ್ಚು ಪೊಲೀಸರು ಪಥಸಂಚಲನ ಮಾರ್ಗದಲ್ಲಿ ರೂಟ್ ಮಾರ್ಚ್ ನಡೆಸಿ ಜಾಗೃತಿ ಮೂಡಿಸಿದ್ದರು.

