– ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿ ಕಲಬುರಗಿಗೆ ರವಾನೆ
ಯಾದಗಿರಿ: ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿಯ ಅಂತ್ಯಕ್ರಿಯೆಯನ್ನು ವಿಶ್ವ ಅರೋಗ್ಯ ಸಂಸ್ಥೆಯ ಪ್ರೋಟೋಕಾಲ್ ನಿಯಮದಂತೆ ಅಧಿಕಾರಿಗಳು ನೆರವೇರಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬಾಲಕಿ ತೀವ್ರ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿ ಕುಟುಂಬಸ್ಥರು ಅವಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿ ಗುಣಮುಖವಾಗದ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.
Advertisement
Advertisement
ಮೃತ ಬಾಲಕಿ ಪೋಷಕರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದೇಶವಿದ್ದರೂ ಸಹ ಏಪ್ರಿಲ್ 1ರಂದು ವಾಪಸ್ ಜಿಲ್ಲೆಗೆ ಬಂದಿದ್ದರು. ಏ.4ರಂದು ಬಾಲಕಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಆರೋಗ್ಯ ಅಧಿಕಾರಿಗಳು ಮೃತ ಬಾಲಕಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಕಲಬುರಗಿಗೆ ಕಳುಹಿಸಿದ್ದಾರೆ. ಸಂಜೆ ಜಿಲ್ಲಾಡಳಿತದಿಂದ ಡಬ್ಲ್ಯುಹೆಚ್‍ಓ ಪ್ರೋಟೋಕಾಲ್ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗಿದೆ.