ವರ್ಷಾಂತರಗಳ ಹಿಂದೆ ತೆರೆ ಕಂಡಿದ್ದ ಪಯಣ ಚಿತ್ರವನ್ನು, ಅದರಲ್ಲಿನ ಚೆಂದದ ಹಾಡುಗಳನ್ನು ಕನ್ನಡದ ಪ್ರೇಕ್ಷಕರ್ಯಾರೂ ಮರೆಯಲು ಸಾಧ್ಯವಿಲ್ಲ. ಅಂಥಾದ್ದೊಂದು ಮೋಡಿ ಮಾಡುತ್ತಲೇ ಮೊದಲ ಚಿತ್ರದಲ್ಲಿಯೇ ಮೆಲೋಡಿಯಸ್ ಗೆಲುವು ದಾಖಲಿಸಿದ್ದವರು ನಿರ್ದೇಶಕ ಕಿರಣ್ ಗೋವಿ. ಆ ನಂತರವೂ ಅದೇ ಯಶದ ಯಾನವನ್ನು ಮುಂದುವರೆಸಿದ್ದ ಕಿರಣ್ ಇದೀಗ ನಾಲಕ್ಕನೇ ಚಿತ್ರ `ಯಾರಿಗೆ ಯಾರುಂಟು’ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ.
ಇದುವರೆಗೂ ನವಿರಾದ ಕಥಾ ಕೌತುಕದ ಮೂಲಕವೇ ಪ್ರೇಕ್ಷಕರನ್ನು ಹಿಡಿಟ್ಟುಕೊಂಡವರು ಕಿರಣ್ ಗೋವಿ. ಪಯಣದಿಂದ ಆರಂಭವಾಗಿ ಸಂಚಾರಿ, ಪಾರು ವೈಫ್ ಆಫ್ ದೇವದಾಸ್ ವರೆಗೂ ಅದನ್ನೇ ಮುಂದುವರೆಸಿದ್ದ ಅವರೀಗ ಯಾರಿಗೆ ಯಾರುಂಟು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರೆಗಿನ ಮೂರೂ ಚಿತ್ರಗಳಿಗಿಂತಲೂ ಭಿನ್ನ ಜಾಡಿನ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿಯೂ ಹಾಡುಗಳಿಗೆ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆಯಂತೆ. ಈ ಮಾತಿಗೆ ಉದಾಹರಣೆಯೆಂಬಂತೆ ಈಗಾಗಲೇ ಎರಡು ಹಾಡುಗಳ ಲಿರಿಕಲ್ ವೀಡಿಯೋಗಳು ಝೇಂಕಾರ್ ಆಡಿಯೋಸ್ ಸಂಸ್ಥೆಯ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿವೆ. ತುಂಬಾ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಮತ್ತು ಭರಪೂರ ಮೆಚ್ಚುಗೆಗಳನ್ನೂ ಪಡೆದುಕೊಂಡಿವೆ!
Advertisement
Advertisement
ಕಿರಣ್ ಗೋವಿ ಯಾರಿಗೆ ಯಾರುಂಟು ಚಿತ್ರದ ಮೂಲಕ ಭರ್ತಿ ಮೂರು ವರ್ಷಗಳ ನಂತರ ಮರಳಿದ್ದಾರೆ. ಒರಟ ಪ್ರಶಾಂತ್ ಅವರೂ ಕೂಡಾ ಅಷ್ಟೇ ಕಾಲಾವಧಿಯ ನಂತರ ಮತ್ತೆ ವಾಪಾಸಾಗಿದ್ದಾರೆ. ಈವರೆಗೂ ಪ್ರಶಾಂತ್ ಮಾಸ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಈ ಚಿತ್ರದಲ್ಲವರು ಅದಕ್ಕೆ ತದ್ವಿರುದ್ಧವಾದ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಬ್ಬ ಇನ್ನೋಸೆಂಟ್ ಹುಡುಗನ ಸುತ್ತ ಸುತ್ತೋ ಕಥಾ ಹಂದರ ಹೊಂದಿರೋ ಈ ಚಿತ್ರಕ್ಕೆ ಮೂವರು ನಾಯಕಿಯರಿದ್ದಾರೆ. ಪಕ್ಕಾ ಫ್ಯಾಮಿಲಿ ಕಥೆ ಹೊಂದಿರೋ ಈ ಚಿತ್ರ ಒಂದು ಪ್ರಮುಖ ಸ್ಥಳದ ಸುತ್ತಾ ಗಿರಕಿ ಹೊಡೆಯುತ್ತದೆಯಂತೆ.
Advertisement
Advertisement
ಹೀಗೆ ನಾಲಕ್ಕನೇ ಚಿತ್ರದ ಮೂಲಕ ಸುದ್ದಿ ಕೇಂದ್ರದಲ್ಲಿರುವ ಕಿರಣ್ ಗೋವಿ ತುಮಕೂರಿನವರು. ಆದರೆ ಬೆಳೆದದ್ದು, ಬದುಕು ಕಟ್ಟಿಕೊಂಡಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಎಸ್‍ಎಂಆರ್‍ವಿ ಕಾಲೇಜಿನಲ್ಲಿ ಬಿಎಸ್‍ಸಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದುಕೊಂಡಿರೋ ಕಿರಣ್ ಕಾಲೇಜು ದಿನಗಳಲ್ಲಿಯೇ ರಂಗಭೂಮಿಯ ತೆಕ್ಕೆಗೆ ಬಿದ್ದವರು. ಕಾಲೇಜು ದಿನಗಳಲ್ಲಿಯೇ ರಂಗಭೂಮಿ ನಟನಾಗಿ ರೂಪುಗೊಂಡಿದ್ದ ಅವರು ಆ ದಿನಗಳಲ್ಲಿಯೇ ಕಾಲೇಜು ಮಟ್ಟದ ನಾಟಕ ಸ್ಪರ್ಧೆಗಳಲ್ಲಿಯೂ ಮಿಂಚಿದ್ದರು. ಇದರಿಂದಾಗಿಯೇ ಕಲಿತ ಓದಿಗೂ ಆಸಕ್ತಿಗೂ ಸೂತ್ರ ಸಂಬಂಧವಿಲ್ಲದಂತಾಗಿತ್ತು. ಈ ನಾಟಕದ ಸಾಹಚರ್ಯದಿಂದಲೇ ಸಿಕ್ಕಿದ ಸಂಪರ್ಕಗಳನ್ನು ಬಳಿಸಿಕೊಂಡ ಕಿರಣ್ ಜಾಹೀರಾತು ಸೃಷ್ಟಿಸುವ ಮಾಯಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಅವರು ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಜಾಹೀರಾತುಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದಾದ ನಂತರ ಸಿನಿಮಾದಲ್ಲಿ ನಟನಾಗಬೇಕೆಂದೇ ಚಿತ್ರರಂಗಕ್ಕೆ ಬಂದ ಕಿರಣ್ ಅವರಿಗೆ ಸಿಕ್ಕವರು ಎ ಆರ್ ಬಾಬು. ಆ ನಂತರದಲ್ಲಿ ಕಿರಣ್ ಅವರ ಆಸಕ್ತಿ ಸಂಪೂರ್ಣವಾಗಿಯೇ ನಿರ್ದೇಶನದತ್ತ ಹೊರಳಿಕೊಂಡಿತ್ತು. ಬಾಬು ಅವರ ಜೊತೆ ಒಂದಷ್ಟು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅವರು ಆ ನಂತರದಲ್ಲಿ ಉಮಾಕಾಂತ್ ಅವರ ಜೊತೆಗೂ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಿ ಅನುಭವ ಹೊಂದಿದ್ದರು. ಇವರಿಬ್ಬರನ್ನೂ ಗುರುಗಳೆಂದೇ ಭಾವಿಸಿರುವ ಕಿರಣ್ ಗೋವಿ ಸ್ವತಂತ್ರ ನಿರ್ದೇಶಕರಾಗಬೇಕೆಂಬ ಕನಸಿನೊಂದಿಗೆ ಮುಂದುವರೆದ ಫಲಕವಾಗಿಯೇ ಪಯಣ ಚಿತ್ರ ಮೂಡಿ ಬಂದಿತ್ತು. ಅದು ಅವರ ಮೊದಲ ಚಿತ್ರ. ಅದು ಮ್ಯೂಸಿಕಲ್ ಹಿಟ್ ಆಗಿ ದಾಖಲಾಗಿದೆ. ಆ ಬಳಿಕ ಸಂಚಾರಿ ಮತ್ತು ಪಾರು ವೈಫ್ ಆಫ್ ದೇವದಾಸ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಕಿರಣ್ ಗೋವಿ ಇದೀಗ ಯಾರಿಗೆ ಯಾರುಂಟು ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ.
ಈಗ ಬಿಡುಗಡೆಯಾಗಿರೋ ಎರಡು ಹಾಡುಗಳು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದೇ ಈ ಚಿತ್ರವೂ ಯಶಸ್ಸಿನ ಪರ್ವವನ್ನು ಮುಂದುವರೆಸೋ ಸೂಚನೆಗಳಿವೆ. ಈ ಹುಮ್ಮಸ್ಸಿನಿಂದಿರೋ ಕಿರಣ್ ಗೋವಿ ಮುಂದಿನ ದಿನಗಳಲ್ಲಿ ನಿರ್ದೇಶನದ ಜೊತೆ ಜೊತೆಗೇ ನಟನಾಗಿಯೂ ಹೊರ ಹೊಮ್ಮುವ ಉದ್ದೇಶ ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv