ಬೆಂಗಳೂರು: ಸಮ್ಮೋಹಕ ಹಾಡುಗಳಿಂದಲೇ ಮೆಲುವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದ್ದ ಯಾರಿಗೆ ಯಾರುಂಟು ಚಿತ್ರ ಬಿಡುಗಡೆಯಾಗಿದೆ. ಹಾಡುಗಳಷ್ಟೇ ಮಾಧುರ್ಯ ಹೊಂದಿರೋ ಕಥೆ, ಅದಕ್ಕೆ ಅಂಟಿಕೊಂಡಂತಿರೋ ಮನೋರಂಜನೆ, ಜೀವನಪ್ರೇಮದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುತ್ತಲೇ ಗೆಲುವಿನ ಯಾನ ಆರಂಭಿಸಿದೆ.
ನಿರ್ದೇಶಕ ಕಿರಣ್ ಗೋವಿ ಈ ಚಿತ್ರದ ಮೂಲಕ ಸೂಕ್ಷ್ಮವಾದ ಕಥಾ ಎಳೆಯೊಂದನ್ನು ತ್ರಿಕೋನ ಪ್ರೇಮದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿಯೇ ನಿರೂಪಿಸಿದ್ದಾರೆ. ಈ ಮೂಲಕವೇ ಯಾರಿಗೆ ಯಾರುಂಟು ವಿಭಿನ್ನವಾದ ಚಿತ್ರವೊಂದನ್ನು ನೋಡಿದ ತೃಪ್ತಿಯನ್ನು ನೋಡುಗರಲ್ಲಿ ಮೂಡಿಸುವಲ್ಲಿಯೂ ಸಫಲವಾಗಿದೆ.
Advertisement
Advertisement
ಈ ಚಿತ್ರದ ನಾಯಕ ದೊಡ್ಡ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವಾತ. ಜಗತ್ತಿನ ಎಲ್ಲ ಲವಲವಿಕೆ, ಜೀವನೋತ್ಸಾಹವನ್ನೂ ತನ್ನೊಳಗೆ ತುಂಬಿಸಿಕೊಂಡಂಥಾ ವ್ಯಕ್ತಿತ್ವ ಆತನದ್ದು. ಇಂಥವನಿಗೆ ಸಾವೆಂಬುದು ಸನಿಹದಲ್ಲಿಯೇ ನಿಂತುಯ ಕಾಯುತ್ತಿರುತ್ತದೆ. ತನ್ನ ಆಯುಷ್ಯ ಮುಗಿಯುತ್ತಾ ಬಂದಿದೆ ಅಂತ ಅರಿವಾಗುತ್ತಲೇ ನಾಯಕನೊಳಗೆ ಅದಮ್ಯ ಆಸೆಯೊಂದು ಮೊಳಕೆಯೊಡೆಯುತ್ತೆ.
Advertisement
ಓರ್ವ ಹುಡುಗಿಯನ್ನು ಉತ್ಕಟವಾಗಿ ಪ್ರೀತಿಸಿ ಆ ಖುಷಿಯಲ್ಲಿಯೇ ಕಣ್ಮುಚ್ಚಬೇಕೆಂಬುದು ಆತನ ಬಯಕೆ. ಮೇಲಿರೋ ದೇವರು ತನಗೆಂದೇ ಚೆಲುವೆಯೊಬ್ಬಳನ್ನು ಕಳಿಸುತ್ತಾನೆಂಬ ನಂಬಿಕೆಯೊಂದಿಗೆ ಜೀವಿಸೋ ಆತ ಮೂವರು ಹುಡುಗೀರ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಹಾಗೆ ಮೂರ್ಮೂರು ಪ್ರೀತಿ ಮೇಂಟೇನು ಮಾಡಲು ಕಾರಣವಾಗೋ ಅಂಶ ಯಾವುದು? ಅದರಲ್ಲಿ ನಾಯಕನಿಗೆ ಎದುರಾಗೋ ತೊಡಕುಗಳೇನು? ಆತ ಬದುಕುಳಿಯುತ್ತಾನಾ ಎಂಬುದು ನಿಜವಾದ ಕುತೂಹಲ. ಅದಕ್ಕೆ ಥೇಟರಿನಲ್ಲಿ ಮಜವಾದ ಉತ್ತರ ಕಾದಿದೆ.
Advertisement
ನಾಯಕ ಪ್ರಶಾಂತ್ ಅವರದ್ದಿಲ್ಲಿ ಪ್ರಶಾಂತವಾದ ಪಾತ್ರ. ಈ ವರೆಗೂ ಮಾಸ್ ಪಾತ್ರಗಳಲ್ಲಿ ನಟಿಸಿದ್ದ ಅವರಿಲ್ಲಿ ಬೇರೆಯದ್ದೇ ಥರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿಕಾ ರವೀಂದ್ರ ಕೂಡಾ ಚೆಂದೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿಉಕೆ ನಾಯಕಿಯರಾದ ಲೇಖಾ ಚಂದ್ರ ಮತ್ತು ಆದಿತಿ ಪಾತ್ರವೂ ನೆನಪಿಟ್ಟುಕೊಳ್ಳುವಂತಿದೆ. ಚೆಂದದ ದೃಷ್ಯಗಳು, ಬಿಗಿ ಕಳೆದುಕೊಳ್ಳದ ನಿರೂಪಣೆ, ಮಾಧುರ್ಯದ ಹಾಡುಗಳೂ ಸೇರಿದಂತೆ ಹೆ ಸಿ ರಘುನಾಥ್ ನಿರ್ಮಾಣದ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv