ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ವಾಗ್ದಾಳಿ ನಡೆಸಿದ್ದು, ಮೋದಿಗೆ ತಾನು ಪ್ರಧಾನ ಮಂತ್ರಿ ಅನ್ನೋ ಅಹಂ ಇದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ಅಟ್ಪಾಡಿ ತೆಹಸಿಲ್‍ನಲ್ಲಿ ಭಾನುವಾರದಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕಳೆದ ವರ್ಷಗಳಲ್ಲಿ ಪ್ರಧಾನಿ ಮೋದಿಗೆ ಸುಮಾರು 30 ಪತ್ರ ಬರೆದಿದ್ದೀನಿ. ಆದ್ರೆ ಈವರೆಗೆ ಒಂದಕ್ಕೂ ಉತ್ತರ ಬಂದಿಲ್ಲ. ಮೋದಿಗೆ ಪ್ರಧಾನಮಂತ್ರಿಗಿರಿಯ ಅಹಂ ಇದೆ. ಅದಕ್ಕಾಗಿ ನನ್ನ ಪತ್ರಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ರು.
Advertisement
Advertisement
ರೈತರ ಸಮಸ್ಯೆಗಳನ್ನ ಕುರಿತು ಮಾರ್ಚ್ 23 ರಂದು ಅಣ್ಣಾ ಹಜಾರೆ ಚಳವಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಮುನ್ನ ಚಳವಳಿಗಾಗಿ ಜನ ಬೆಂಬಲ ಒಗ್ಗೂಡಿಸಲು ಮೂರು ಸಮಾವೇಶಗಳನ್ನ ನಡೆಸಲಿದ್ದು, ಅಟ್ಪಾಡಿಯಲ್ಲಿ ಮೊದಲ ಸಮಾವೇಶ ಭಾನುವಾರದಂದು ನಡೆದಿದೆ.
Advertisement
Advertisement
ಇದು ಹಿಂದೆಂದೂ ನಡೆದಿರದಂತಹ ಬೃಹತ್ ಚಳವಳಿ ಆಗಿರಲಿದ್ದು, ಸರ್ಕಾರಕ್ಕೆ ಇದು ಎಚ್ಚರಿಕೆಯಾಗಲಿದೆ ಎಂದು ಹಜಾರೆ ಹೇಳಿದ್ರು. ನನ್ನ ಸಮಾವೇಶ ಮತ್ತು ಚಳವಳಿಗಳ ಮೂಲಕ ಓಟು ಗಳಿಸುವ ಉದ್ದೇಶ ನನಗಿಲ್ಲ. ಜನ ಲೋಕ್‍ಪಾಲ್‍ಗೆ ಬೃಹತ್ ಜಾಥಾ ನಡೆದಂತೆಯೇ, ರೈತರ ಸಮಸ್ಯೆಗಳ ಬಗ್ಗೆಯೂ ಅದೇ ರೀತಿ ಚಳವಳಿ ನಡೆಯುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ರು.
ಲೋಕ್‍ಪಾಲ್ ಅನುಷ್ಠಾನ, ಲೋಕಾಯುಕ್ತ ನೇಮಕ, ರೈತರಿಗೆ 5 ಸಾವಿರ ರೂ. ಪಿಂಚಣಿ ಹಾಗೂ ರೈತರ ಬೆಳೆಗಳಿಗೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಅಣ್ಣಾ ಹಜಾರೆ ಹೋರಾಟಕ್ಕೆ ಮುಂದಾಗಿದ್ದಾರೆ.