– ಎನ್‌ಇಪಿ ರದ್ದುಗೊಳಿಸಿ; ಮಕ್ಕಳಿಗೆ ಸೈಕಲ್ ಭಾಗ್ಯ ಮರು ಜಾರಿ ಮಾಡಿ
– ಸಿಂಡಿಕೇಟ್‌ಗಳಲ್ಲಿ ಬಿಜೆಪಿ ನೇಮಿಸಿರೋ ಕೋಮುವಾದಿ ಮನಸ್ಥಿತಿ ಸದಸ್ಯರನ್ನ ಬದಲಾಯಿಸಿ
– ಶಾಲೆಗಳಲ್ಲಿ ಬಿಸಿಯೂಟ ಮಾದರಿಯಲ್ಲಿ ಬೆಳಗಿನ ಉಪಾಹಾರ ಒದಗಿಸಿ
ಬೆಂಗಳೂರು: ಹಿಜಬ್ (Hijab) ವಿವಾದದಿಂದ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತು ಸರ್ಕಾರ ಆದೇಶವನ್ನು ಪರಿಷ್ಕರಿಸಬೇಕು ಎಂದು ಸಾಹಿತಿಗಳು, ಬರಹಗಾರರು ಹಾಗೂ ಜನಪರ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಮಾಡಿದರು.
ಕನ್ನಡ ನಾಡಿನ ಹೆಸರಾಂತ ಸಾಹಿತಿ, ಬರಹಗಾರರು ಮತ್ತು ನಾನಾ ಜನಪರ ಸಂಘಟನೆಗಳ ಮುಖಂಡರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಮುಖ್ಯಮಂತ್ರಿಗಳ ಮುಂದೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ: ಗ್ಯಾರಂಟಿಗಳ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡ್ತೀವಿ: ಹೆಚ್‌ಕೆ ಪಾಟೀಲ್
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು. ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು. ಹಲವರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪಠ್ಯ ಪರಿಷ್ಕರಣೆ ಮಾಡಬೇಕು. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿದ್ದ ಪಠ್ಯ ತೆಗೆಯಬೇಕು. ಬಿಜೆಪಿ ಬದಲಾಯಿಸಿದ್ದ ಪಠ್ಯಗಳನ್ನು ತೆಗೆದು ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬೇಕು. ಇಂದಿನ ಸಂದರ್ಭಕ್ಕೆ ತಕ್ಕಂತೆ ಪಠ್ಯಗಳ ಬದಲಾವಣೆಗೆ ಕೂಡಲೇ ತಜ್ಞರ ಸಮಿತಿ ರಚಿಸಬೇಕು. ರಂಗಾಯಣಗಳಂಥ ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಥೆಗಳಿಗೆ ಜಾತ್ಯತೀತ ವ್ಯಕ್ತಿಗಳ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್
ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಬೇಕು. ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ, ಸಾಕ್ಸ್ ಒದಗಿಸಬೇಕು. ಸೈಕಲ್ ಭಾಗ್ಯ ಮರು ಜಾರಿಗೊಳಿಸಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಬೇಕು. ಸಾಂಸ್ಕೃತಿಕ ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಕೂಡಲೇ ಬದಲಾಯಿಬೇಕು. ಬಿಜೆಪಿ ಸರ್ಕಾರ ಘೋಷಿಸಿರುವ ಪ್ರಶಸ್ತಿ, ಪುರಸ್ಕಾರಗಳನ್ನು ಕೂಡಲೇ ತಡೆಹಿಡಿಯಬೇಕು. ಸಾಂಸ್ಕೃತಿಕ ಕ್ಷೇತ್ರದ ಸಂಘ ಸಂಸ್ಥೆಗಳಿಗೆ ಹಿಂದಿನ ಸರ್ಕಾರ ನೀಡಿರುವ ಅನುದಾನಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ವಿಶ್ವವಿದ್ಯಾಲಯಗಳಲ್ಲಿನ ಸಿಂಡಿಕೇಟ್‌ಗಳಿಗೆ ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ. ಅವರನ್ನು ಕೂಡಲೇ ಬದಲಾಯಿಸಿ, ಜಾತ್ಯತೀತ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಉದ್ದೇಶದಿಂದ ಸಾಂಸ್ಕೃತಿಕ ಕ್ಷೇತ್ರದ ಆಯ್ದ ಗಣ್ಯ ಸದಸ್ಯರನ್ನು ಒಳಗೊಂಡಂತೆ, ಮುಖ್ಯಮಂತ್ರಿಗಳ ಸಾಂಸ್ಕೃತಿಕ ಸಲಹೆಗಾರರನ್ನು ಸರ್ಕಾರ ನೇಮಿಸಬೇಕು. ಹಿಂದಿನ ಸರ್ಕಾರ ಕನ್ನಡಿಗರ ಮೇಲೆ ಹೇರಿರುವ ಎನ್‌ಇಪಿ ವ್ಯವಸ್ಥೆಯನ್ನು ಕೂಡಲೇ ತಡೆಹಿಡಿದು, ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ಕೊಡಬೇಕು. ಶಾಲೆಗಳಲ್ಲಿ ಬಿಸಿಯೂಟದ ಮಾದರಿಯಲ್ಲಿ ಬೆಳಗಿನ ಉಪಾಹಾರ ಒದಗಿಸಬೇಕು ಎಂದು ತಿಳಿಸಲಾಗಿದೆ. ಪ್ರಮುಖ ಬದಲಾವಣೆಗೆ ಒತ್ತಾಯಿಸಿ ಸಮಾನ ಮನಸ್ಕರ ಒಕ್ಕೂಟ ಹೆಸರಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಲಾಗಿದೆ.