ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ : ಕುಸ್ತಿಪಟುಗಳಿಗೆ ಸಿಂಗ್‌ ಸವಾಲ್‌

Public TV
1 Min Read
Brij Bhushan Sharan Singh

ನವದೆಹಲಿ: ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಮತ್ತು ಬಿಜೆಪಿಯ ಸಂಸತ್ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಕುಸ್ತಿಪಟುಗಳಿಗೆ (Wrestlers) ಸವಾಲು ಎಸೆದಿದ್ದಾರೆ.

ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ (Court) ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

Wrestlers Protest

ಲೈಂಗಿಕ ಕಿರುಕುಳ (Sexual Harassment) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು 15 ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿಕೆಯ ಬೆನ್ನಲ್ಲೇ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಈ ಹೇಳಿಕೆ ಪ್ರಕಟವಾಗಿದೆ.

ಇದುವರೆಗಿನ ತನಿಖೆಯ ಸಮಯದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. ಆರೋಪಗಳನ್ನು ದೃಢಪಡಿಸಲು ಕುಸ್ತಿಪಟುಗಳು ಸಾಕ್ಷ್ಯಗಳನ್ನು ನೀಡಿಲ್ಲ. 15 ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

 

ಒಲಿಂಪಿಕ್ಸ್‌ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಕ್ರೀಡಾಪಟುಗಳು ಈ ವರ್ಷದ ಜನವರಿಯಲ್ಲಿ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಮಹಿಳಾ ಕ್ರೀಡಾಪಟುಗಳಿಗೆ ಸಿಂಗ್‌ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Share This Article