ವಡೋದರಾ: ನಾಯಕಿ ಸ್ಮೃತಿ ಮಂಧಾನ (Smriti Mandhana) ಸ್ಫೋಟಕ ಅರ್ಧಶತಕದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್ ತಂಡ ಸತತ ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್‌ಗಳಿಗೆ 141 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿಗೆ 142 ರನ್‌ಗಳ ಗುರಿ ನೀಡಿತು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 2 ವಿಕೆಟ್ ನಷ್ಟಕ್ಕೆ ರನ್ ಗಳಿಸಿ ಗೆಲುವಿನ ಪತಾಕೆ ಹಾರಿಸಿತು. ತಂಡದಿಂದ ಮೊದಲು ಕ್ರೀಸ್‌ಗಿಳಿದ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವೈಟ್ ಜೊತೆಯಾಟವಾಡಿ 65 ಎಸೆತಗಳಲ್ಲಿ 107 ರನ್ ಕಲೆಹಾಕಿ ಗೆಲುವಿನ ದಡದತ್ತ ತಂಡವನ್ನು ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಡೇನಿಯಲ್ ವೈಟ್ 7 ಫೋರ್ ಸಿಡಿಸಿ 33 ಬಾಲ್‌ಗಳಿಗೆ 42 ರನ್ ಗಳಿಸಿ ಔಟಾದರು. ಸ್ಮೃತಿ ಮಂಧಾನ 3 ಸಿಕ್ಸ್ ಹಾಗೂ 10 ಫೋರ್ ಸಿಡಿಸಿ 47 ಎಸೆತಗಳಿಗೆ 81 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಚಾ ಘೋಷ್ ಕೊನೆಗೆ ಅಬ್ಬರದ ಸಿಕ್ಸ್ ಸಿಡಿಸಿ ಮಿಂಚಿದರು. ರಿಚಾ 5 ಎಸೆತಗಳಿಗೆ 11 ರನ್ ಗಳಿಸಿದರೆ, ಪೆರ‍್ರಿ 13 ಬಾಲ್‌ಗಳಿಗೆ 7 ರನ್ ಕಲೆಹಾಕಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಈ ಮೊದಲು ಬ್ಯಾಟ್ ಬೀಸಿದ ಡೆಲ್ಲಿ ತಂಡದ ಶೆಫಾಲಿ ವರ್ಮ 2ನೇ ಎಸೆತಕ್ಕೆ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಎಂಟ್ರಿಕೊಟ್ಟ ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಜೆಮಿಮಾ ರೊಡ್ರಿಗಸ್ ಜೊತೆಯಾಟವಾಡಿ 39 ಎಸೆತಗಳಿಗೆ 59 ರನ್ ಗಳಿಸಿಕೊಟ್ಟು ತಂಡವನ್ನು ಮುನ್ನಡೆಸಿದರು. ಜೆಮಿಮಾ ರೊಡ್ರಿಗಸ್ 2 ಸಿಕ್ಸ್ ಹಾಗೂ 4 ಫೋರ್‌ಗಳನ್ನು ಸಿಡಿಸಿ 22 ಬಾಲ್‌ಗಳಿಗೆ 34 ರನ್ ಕಲೆಹಾಕಿ ಪೆವಿಲಿಯನ್‌ಗೆ ಮರಳಿದರು. ಇವರಿಬ್ಬರ ಜೊತೆಯಾಟ 7ನೇ ಓವರ್‌ಗೆ ಮುರಿದುಬಿತ್ತು. ಮೆಗ್ ಲ್ಯಾನಿಂಗ್ 3 ಫೋರ್ ಹೊಡೆದು 19 ಎಸೆತಗಳಿಗೆ 17 ರನ್‌ಗಳಿಸಿ ಔಟಾದರು.