ವಡೋದರ: ಕೊನೆಯವರೆಗೂ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವಿಗೆ 165 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯವರೆಗೂ ಹೋರಾಟ ನಡೆಸಿ ಗೆದ್ದು ಬೀಗಿದೆ.
ಕೊನೆಯ ಓವರ್ ರೋಚಕ:
ಕೊನೆಯ 7 ಎಸೆತಗಳಲ್ಲಿ 16 ರನ್ ಬೇಕಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ರಾಧಾ ಯಾದವ್ 19ನೇ ಓವರ್‌ನ 6ನೇ ಎಸೆತವನ್ನು ಸಿಕ್ಸರ್ ಬಾರಿಸಿದರು. ಇನ್ನೂ 6 ಎಸೆತಗಳಲ್ಲಿ 10 ರನ್ ಬೇಕಿತ್ತು. ಸಜೀವನ್ ಸಜನಾ ಬೌಲಿಂಗ್‌ನಲ್ಲಿದ್ದರೆ, ನಿಕಿ ಪ್ರಸಾದ್ ಕ್ರೀಸ್‌ನಲ್ಲಿದ್ದರು. ರೋಚಕ ಗಟ್ಟಕ್ಕೆ ಪಂದ್ಯ ತಿರುಗಿತ್ತು, ಅಭಿಮಾನಿಗಳಲ್ಲಿ ಹೃದಯ ಬಡಿತ ಹೆಚ್ಚಿಸಿತ್ತು. ಈ ವೇಳೆ ಡೆಲ್ಲಿ ಪರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ನಿಕ್ಕಿ ಮೊದಲ ಮೂರು ಎಸೆತಗಳಲ್ಲೇ 7 ರನ್ ಬಾರಿಸಿದ್ರು. 4ನೇ ಎಸೆತದಲ್ಲಿ ರಾಧಾ 1 ರನ್ ಕದಿಯುವಲ್ಲಿ ಯಶಸ್ವಿಯಾದರು. ಇನ್ನೂ 2 ಬಾಲ್‌ಗೆ 2 ರನ್ ಬೇಕಿದ್ದಾಗಲೇ ಶಿಖಾ ಪಾಂಡೆ ರನೌಟ್‌ಗೆ ತುತ್ತಾದರು. ಕೊನೇ 1 ಎಸೆತದಲ್ಲಿ 2 ರನ್ ಬೇಕಿದ್ದಾಗ ಅರುಂದತಿ ರೆಡ್ಡಿ ರನ್ ಕದಿಯುವಲ್ಲಿ ಯಶಸ್ವಿಯಾದರು. ಇದರಿಂದ ಗೆಲುವು ಡೆಲ್ಲಿ ಪಾಲಾಯಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್, ಶಫಾಲಿ ವರ್ಮ ಪವರ್ ಪ್ಲೇನಲ್ಲಿ ಸ್ಫೋಟಕ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ 36 ಎಸೆತಗಳಲ್ಲಿ ಬರೋಬ್ಬರಿ 60 ರನ್ ಡೆಲ್ಲಿ ತಂಡ ಕಲೆಹಾಕಿತ್ತು. ಆದ್ರೆ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶಫಾಲಿ ವರ್ಮ ಸಿಕ್ಸರ್ ಸಿಡಿಸುವ ಭರದಲ್ಲಿ ಕ್ಯಾಚ್ ನೀಡಿ ಔಟಾದರು. ಈ ಬೆನ್ನಲ್ಲೇ ಸ್ಫೋಟಕ ಆಟಗಾರ್ತಿ ಜೆಮಿಮಾ ರೊಡ್ರಿಗ್ಸ್, ಮೆಗ್ ಲ್ಯಾನಿಂಗ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಅಲಿಸ್ ಕ್ಯಾಪ್ಸಿ, ಸಾರಾ ಬ್ರೈಸ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡದಲ್ಲಿ ಮತ್ತೆ ಗೆಲುವಿನ ಕನಸು ಚಿಗುರಿತ್ತು. ಅಷ್ಟರಲ್ಲೇ ಸಾರಾ ಬ್ರೈಸ್ ಆಟಗಕ್ಕೆ ಹೀಲಿ ಮ್ಯಾಥ್ಯೂಸ್ ಬ್ರೇಕ್ ಹಾಕಿ ಪೆವಿಲಿಯನ್ ದಾರಿ ತೋರಿದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ನಿಕ್ಕಿ ಪ್ರಸಾದ್ (35 ರನ್), ಸಾರಾ (10 ಎಸೆತಗಳಲ್ಲಿ 21 ರನ್) ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಮಹಿಳಾ ತಂಡ ಮೊದಲ ಓವರ್‌ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 4 ಓವರ್‌ಗಳಲ್ಲಿ 32 ರನ್‌ಗಳಿಗೆ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು.
ನಟಾಲಿ-ಕೌರ್ ಜೊತೆಯಾಟ:
ಸಂಕಷ್ಟದಲ್ಲಿದ್ದ ಮುಂಬೈ ತಂಡಕ್ಕೆ ಆಲ್‌ರೌಂಡರ್ ನಟಾಲಿ ಸ್ಕಿವರ್ ಬ್ರಂಟ್, ನಾಯಕಿ ಹರ್ಮನ್ ಪ್ರೀತ್ ಕೌರ್ ಆಸರೆಯಾದರು. 3ನೇ ವಿಕೆಟಿಗೆ ಈ ಜೋಡಿ 40 ಎಸೆತಗಳಲ್ಲಿ 73 ರನ್ ಜೊತೆಯಾಟ ನೀಡಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಕೌರ್ 22 ಎಸೆತಗಳಲ್ಲಿ 42 ರನ್ (4 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ಇನ್ನೂ ಕೊನೆಯವರೆಗೂ ಹೋರಾಡಿದ ನಟಾಲಿ 59 ಎಸೆತಗಲ್ಲಿ 13 ಬೌಂಡರಿಯೊಂದಿಗೆ 80 ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ 11 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 19.1 ಓವರ್‌ಗಳಲ್ಲೇ ಮುಂಬೈ 164 ರನ್‌ಗಳಿಗೆ ಆಲೌಟ್ ಆಯಿತು.
ಡೆಲ್ಲಿ ಪರ ಅನ್ನಾಬೆಲ್ ಸದರ್ಲ್ಯಾಂಡ್ 3 ವಿಕೆಟ್ ಕಿತ್ತರೆ, ಶಿಖಾ ಪಾಂಡೆ 2 ವಿಕೆಟ್, ಅಲಿಸ್ ಕ್ಯಾಪ್ಸಿ, ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.