ಹಾಲಿ ಚಾಂಪಿಯನ್ಸ್‌ ಮುಂಬೈ ಮನೆಗೆ – ಆರ್‌ಸಿಬಿ ಮೊದಲಬಾರಿ ಫೈನಲ್‌ಗೆ

Public TV
3 Min Read
RCB

– 5 ರನ್‌ಗಳ ರೋಚಕ ಗೆಲುವು – ಹರ್ಮನ್‌ಪ್ರೀತ್‌ ಕೌರ್‌ ಹೋರಾಟ ವ್ಯರ್ಥ

ನವದೆಹಲಿ: ರೋಚಕ ಪಂದ್ಯದಲ್ಲಿ ಜಿದ್ದಾ-ಜಿದ್ದಿ ಹೋರಾಟ ನಡೆಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB Women) ತಂಡ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ಗೆ (Mumbai Indians) ಸೋಲುಣಿಸಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 130 ರನ್‌ ಗಳಿಸಿ 5 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು.

ಕೊನೇ ಓವರ್‌ನ ರೋಚಕತೆ ಹೇಗಿತ್ತು?
ಕೊನೇ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಮೊದಲ 2 ಎಸೆತಗಳಲ್ಲಿ 2 ರನ್‌ ಮುಂಬೈ ತಂಡಕ್ಕೆ ಸೇರ್ಪಡೆಯಾಯಿತು. 3ನೇ ಎಸೆತದಲ್ಲಿ 2 ರನ್‌ ತಂದು ಕೊಟ್ಟ ಪೂಜಾ ವಸ್ತ್ರಕಾರ್‌ 4ನೇ ಎಸೆತದಲ್ಲಿ ಸ್ಟಂಪ್‌ ಔಟ್‌ಗೆ ತುತ್ತಾದರು. ಇದರಿಂದ ಪಂದ್ಯ ಮತ್ತಷ್ಟು ರೋಚಕ ಹಂತಕ್ಕೆ ತಲುಪಿತ್ತು. ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿತ್ತು, ಪದೇ ಪದೇ ಆರ್‌ಸಿಬಿ ಆರ್‌ಸಿಬಿ ಎನ್ನುತ್ತಲೇ ಗುನುಗುತ್ತಿದ್ದರು. ಮುಂದಿನ ಎಸೆತ ಏನಾಗುತ್ತದೆ? ಸಿಕ್ಸರ್‌ ಸಿಡಿಯುತ್ತಾ- ಬೌಂಡರಿ ಬೀಳುತ್ತಾ? ಎಂಬ ಕುತೂಹಲ ಮೂಡಿತ್ತು. 5ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಅಮನ್‌ಜೋತ್‌ ಕೌರ್ 1 ರನ್‌ ತಂದುಕೊಟ್ಟರು. ಅಮೇಲಿಯಾ ಕೇರ್‌ ಸ್ಟ್ರೈಕ್‌ಗೆ ಬರುತ್ತಿದ್ದಂತೆ ಮುಂಬೈ ಅಭಿಮಾನಿಗಳ ಕಾತರ ಹೆಚ್ಚಾಯಿತು. ಹಿಂದಿನ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ್ದ ಅಮೇಲಿಯಾ ಸಿಕ್ಸರ್‌ ಬಾರಿಸುತ್ತಾರೆ ಎಂಬ ವಿಶ್ವಾಸವೂ ಇತ್ತು. ಆದ್ರೆ ಬೌಲಿಂಗ್‌ನಲ್ಲಿ ಚಾಣಾಕ್ಷತೆ ಮೆರೆದ ಆಶಾ ಸೋಭಾನ ಕೇವಲ ಒಂದು ರನ್‌ ಮಾತ್ರ ಬಿಟ್ಟುಕೊಡುವಲ್ಲಿ ಯಶಸ್ವಿಯಾದರು. ಇದರಿಂದ ಆರ್‌ಸಿಬಿ 5 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ ಚೇಸಿಂಗ್‌ ಆರಂಭಿಸಿದ್ದ ಮುಂಬೈ ಇಂಡಿಯನ್ಸ್‌ ಸಹ ನಿಧಾನಗತಿಯ ಬ್ಯಾಟಿಂಗ್‌ ನಡೆಸಿತ್ತು. ಮೊದಲ 10 ಓವರ್‌ಗಳಲ್ಲಿ 60 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಅಲ್ಲಿಯವರೆಗೂ ಇತ್ತಂಡಗಳ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಆದ್ರೆ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕಿ‌ ಹರ್ಮನ್‌ ಪ್ರೀತ್‌ಕೌರ್‌ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಇದಕ್ಕೆ ಆಲ್‌ರೌಂಡರ್‌ ಅಮೇಲಿಯಾ ಕೇರ್‌ ಸಹ ಸಾಥ್‌ ನೀಡಿದರು. ಇದರಿಂದ ಗೆಲುವು ಮುಂಬೈ ತಂಡಕ್ಕೆ ಎಂದೇ ಭಾವಿಸಲಾಗಿತ್ತು. ಹರ್ಮನ್‌ ವಿಕೆಟ್‌ ಬೀಳುತ್ತಿದ್ದಂತೆ ಮತ್ತೆರಡು ವಿಕೆಟ್‌ ಉರುಳಿದ್ದು, ತಂಡಕ್ಕೆ ಭಾರೀ ದೊಡ್ಡ ಆಘಾತ ನೀಡಿತ್ತು. ಕೊನೆನೇ ಕ್ಷಣದಲ್ಲಿ ಸಜೀವನ್ ಸಜನ ಅವರ ಸ್ಟಂಪ್‌ ಔಟ್‌ ಸಹ ಮುಂಬೈ ಸೋಲಿಗೆ ಕಾರಣವಾಯಿತು.

Mumbai Indians 2

ಮುಂಬೈ ಪರ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 33 ರನ್‌, ಅಮೇಲಿಯಾ ಕೇರ್‌ 27 ರನ್‌, ಯಾಸ್ತಿಕಾ ಭಾಟಿಯಾ 19ರನ್‌, ಹೇಲಿ ಮ್ಯಾಥ್ಯೂಸ್‌ 15 ರನ್‌, ನಟಾಲಿ ಸ್ಕಿವರ್‌ ಬ್ರಂಟ್‌ 23ರನ್‌, ಗಳಿಸಿದ್ರೆ, ಪೂಜಾ ವಸ್ತ್ರಕಾರ್‌ 4 ರನ್‌, ಸಜೀವನ್‌ ಸಜನ, ಅಮನ್‌ಜೋತ್‌ ಕೌರ್‌ ತಲಾ ಒಂದೊಂದು ರನ್‌ ಗಳಿಸಿದರು. ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್‌ 2 ವಿಕೆಟ್‌, ಎಲ್ಲಿಸ್‌ ಪೆರಿ, ಸೋಫಿ ಮೊಲಿನೆಕ್ಸ್‌, ಜಾರ್ಜಿಯಾ, ಸೋಭಾನಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಅಗ್ರಕ್ರಮಾಂಕದ ಕಳಪೆ ಬ್ಯಾಟಿಂಗ್‌:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಪರ ಅಗ್ರಕ್ರಮಾಂಕದ ಆಟಗಾರ್ತಿಯರು ಕಳಪೆ ಪ್ರದರ್ಶನ ತೋರಿದರು. ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಹೊರತುಪಡಿಸಿ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪೆರೇಡ್‌ ನಡೆಸಿದರು.

RCB 5

ಪೆರ್ರಿ ಜವಾಬ್ದಾರಿ ಅರ್ಧಶತಕ: ಒತ್ತಡದ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಎಲ್ಲಿಸ್‌ ಪೆರ್ರಿ 50 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್‌ನೊಂದಿಗೆ 66 ರನ್‌ ಚಚ್ಚಿದರು. ಇದರೊಂದಿಗೆ ಜಾರ್ಜಿಯಾ ವೇರ್ಹ್ಯಾಮ್ 18 ರನ್‌ಗಳ ಕೊಡುಗೆ ನೀಡಿದರು. ಇನ್ನುಳಿದಂತೆ ನಾಯಕಿ ಸ್ಮೃತಿ ಮಂಧಾನ, ಸೋಫಿ ಡಿವೈನ್‌ ತಲಾ 10 ರನ್‌, ರಿಚಾ ಘೋಷ್‌ 14 ರನ್‌, ಸೋಫಿ ಮೊಲಿನೆಕ್ಸ್ 11 ರನ್‌, ಶ್ರೇಯಾಂಕ ಪಾಟೀಲ್‌ 3 ರನ್‌ ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 135 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಮುಂಬೈ ಪರ ಹೇಲಿ ಮ್ಯಾಥ್ಯೂಸ್‌, ನಟಾಲಿ ಸ್ಕಿವರ್‌ ಬ್ರಂಟ್‌ ಹಾಗೂ ಸೈಕಾ ಇಶಾಕ್‌ ತಲಾ ಎರಡು ವಿಕೆಟ್‌ ಪಡೆದರು.

Mumbai Indians

Share This Article