– 174 ವರ್ಷಗಳಲ್ಲಿ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಸೈಕ್ಲೋನ್
– ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ
ಕಿಂಗ್‌ಸ್ಟನ್: ಜಮೈಕಾದಲ್ಲಿ (Jamaica) ಮೆಲಿಸ್ಸಾ ಚಂಡಮಾರುತವು (Hurricane Melissa) ಅಪ್ಪಳಿಸಿದೆ. ಇದು 174 ವರ್ಷಗಳಲ್ಲಿ ಜಮೈಕಾಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತವಾಗಿದೆ ರಾಷ್ಟ್ರೀಯ ಹರಿಕೇನ್ ಸೆಂಟರ್ ತಿಳಿಸಿದೆ.
ಮೆಲಿಸ್ಸಾ ಚಂಡಮಾರುತವು ಜಮೈಕಾದಲ್ಲಿ ಭಾರೀ ಭೂಕುಸಿತವನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಈ ಚಂಡಮಾರುತದಿಂದ ಸುಮಾರು 13 ಅಡಿಗಳಷ್ಟು ಎತ್ತರದ ಸಮುದ್ರದ ಉಬ್ಬರ ಮತ್ತು ಕೆಲವು ಪ್ರದೇಶಗಳಲ್ಲಿ 40 ಇಂಚುಗಳಿಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ
ಮೆಲಿಸ್ಸಾ ಚಂಡಮಾರುತವು ಗಂಟೆಗೆ 282 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ. ದ್ವೀಪದಾದ್ಯಂತ ವಿಪರೀತ ಗಾಳಿ, ಹಠಾತ್ ಪ್ರವಾಹ ಮತ್ತು ಭೀಕರ ಚಂಡಮಾರುತದ ಅಲೆಗಳು ಬೀಸುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಜಮೈಕಾದಲ್ಲಿ 800ಕ್ಕೂ ಹೆಚ್ಚು ನಿರಾಶ್ರಿತ ಕೇಂದ್ರಗಳನ್ನು ತೆರೆದಿದ್ದು, ತಗ್ಗು ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಚಂಡಮಾರುತದ ಪರಿಣಾಮ ಜಮೈಕಾದ 50,000 ಕ್ಕೂ ಹೆಚ್ಚು ಮನೆಗಳು ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಮೆಲಿಸ್ಸಾ ಚಂಡಮಾರುತಕ್ಕೆ ಹೈಟಿ ಮತ್ತು ಡೊಮಿನಿಕನ್ ಗಣರಾಜ್ಯ ಸೇರಿ ಕೆರಿಬಿಯನ್‌ನಾದ್ಯಂತ ಏಳು ಮಂದಿ ಬಲಿಯಾಗಿದ್ದಾರೆ.
ಕಿಂಗ್‌ಸ್ಟನ್‌ನ ಕೆಲವು ಭಾಗಗಳು ಈಗಾಗಲೇ ಪ್ರವಾಹಕ್ಕೆ ಸಿಲುಕಿವೆ. ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಲ್ಲದೇ ಕಿಂಗ್‌ಸ್ಟನ್ ಮತ್ತು ಮಾಂಟೆಗೊ ಕೊಲ್ಲಿಯ ಪ್ರಮುಖ ವಿಮಾನ ನಿಲ್ದಾಣಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

