ಅಂತಾರಾಷ್ಟ್ರೀಯ ಕಡಲ ಸಂಸ್ಥೆ (IMO) ಹಡಗುಗಳು ಹೊರಸೂಸುವ ಇಂಗಾಲಕ್ಕೆ ತೆರಿಗೆ (Global Carbon Tax) ವಿಧಿಸಲು ಮುಂದಾಗಿದೆ. ಹಸಿರುಮನೆ (Greenhouse) ಪರಿಣಾಮ ಉಂಟು ಮಾಡುವ ಅನಿಲ (GHG) ಹೊರಸೂಸುವಿಕೆಯ ಮೇಲೆ ಇದು ಮೊದಲ ಜಾಗತಿಕ ತೆರಿಗೆಯಾಗಿದೆ. ಜಾಗತಿಕ ಹೊರಸೂಸುವಿಕೆಯಲ್ಲಿ ಸಮುದ್ರ ವಲಯದ 3% ಪಾಲನ್ನು ತಡೆಯುವ ಸಲುವಾಗಿ IMO ಈ ನಿರ್ಧಾರ ಮಾಡಿದೆ.
ಈ ತೆರಿಗೆ ಯಾವಾಗಿಂದ ಜಾರಿ?
ಸರಕುಗಳನ್ನು ಸಾಗಿಸುವ ದೊಡ್ಡ ಹಡಗುಗಳು ಅಪಾರ ಪ್ರಮಾಣದ ಇಂಧನ ಬಳಕೆ ಮಾಡುತ್ತವೆ. ಇದರಿಂದ ಕಳೆದ ದಶಕದಲ್ಲಿ ಹಡಗು ಹೊರಸೂಸುವಿಕೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಇಂಗಾಲ ಟ್ಯಾಕ್ಸ್ ವಿಧಿಸಲು IMO ಮುಂದಾಗಿದೆ. 2026ರ ಆರಂಭದಲ್ಲಿ ಇಂಗಾಲ ಟ್ಯಾಕ್ಸ್ ಅನುಷ್ಠಾನದ ವಿವರಗಳನ್ನು ಪರಿಶೀಲಿಸಿ, ಅಕ್ಟೋಬರ್ ವೇಳೆಗೆ ತಿದ್ದುಪಡಿಗಳನ್ನು ಅಂತಿಮಗೊಳಿಸಲು IMO ಯೋಜನೆ ರೂಪಿಸಿಕೊಂಡಿದೆ.
ಅಂದ ಹಾಗೆ ಈ ಟ್ಯಾಕ್ಸ್ 2028ರಿಂದ ಜಾರಿಗೆ ಬರಲಿದೆ. ಇದರಿಂದ 2030ರ ವೇಳೆಗೆ 40 ಶತಕೋಟಿ ಡಾಲರ್ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ತೆರಿಗೆಯ ಹಣವನ್ನು ಇಂಗಾಲ ಹಾಗೂ ಇನ್ನಿತರೆ ಹಸಿರುಮನೆ ಪರಿಣಾಮ ಉಂಟು ಮಾಡುವ ಅನಿಲಗಳ ಕಡಿಮೆ ಮಾಡುವ ಕ್ರಮಕ್ಕೆ ಬಳಕೆ ಮಾಡಲಾಗುತ್ತದೆ. ಈ ನಿಯಮ ಜಾರಿಯಾದರೆ 2030ರ ವೇಳೆಗೆ ಹಡಗುಗಳ ಹೊರಸೂಸುವಿಕೆಯನ್ನು 10% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು IMO ಹೇಳಿಕೊಂಡಿದೆ.
ಹಡಗುಗಳ ಕಾರ್ಯ ವಿಧಾನ, ಹೊರಸೂಸುವಿಕೆಯ ತೀವ್ರತೆಯ ಆಧಾರದ ಮೇಲೆ ತೆರಿಗೆ
ಸಾಂಪ್ರದಾಯಿಕ ಇಂಧನವನ್ನು ಬಳಸುವ ಹಡಗುಗಳು ಹೊರಸೂಸುಸುವ ಅತ್ಯಂತ ಮಾಲಿನ್ಯಕಾರಕ ಅನಿಲಗಳ ಪ್ರತಿ ಟನ್‌ಗೆ 380 ಡಾಲರ್ ಮತ್ತು ಮಿತಿ ಮೀರಿದ ಇಂಗಾಲ ಹೊರಸೂಸುವಿಕೆಯ ಪ್ರತಿ ಟನ್‌ಗೆ 100 ಡಾಲರ್ ತೆರಿಗೆ ವಿಧಿಸಲಾಗುತ್ತದೆ.
ತೆರಿಗೆ ನೀತಿಯ ಪ್ರಮುಖ ತಾಂತ್ರಿಕ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ನೀತಿಯನ್ನು ಅಕ್ಟೋಬರ್ 2025 ರಲ್ಲಿ ಔಪಚಾರಿಕವಾಗಿ ಅಂಗೀಕರಿಸುವ ನಿರೀಕ್ಷೆಯಿದೆ.
ಯಾಕೆ ಈ ತೆರಿಗೆ ಅಗತ್ಯ?
ಹೆಚ್ಚುತ್ತಿರುವ ಮಾಲಿನ್ಯದಿಂದ ಹಸಿರುಮನೆ ಪರಿಣಾಮವನ್ನು ಭೂಮಿ ಎದುರಿಸುತ್ತಿದೆ. ಇದರ ಪರಿಣಾಮವಾಗಿ ಹವಾಮಾನದ ಅಪಾಯಗಳನ್ನು ಸಣ್ಣ ದ್ವೀಪ ರಾಷ್ಟ್ರಗಳು ಎದುರಿಸುತ್ತಿವೆ. ಇಂತಹ ದ್ವೀಪ ರಾಷ್ಟ್ರಗಳ ರಕ್ಷಣೆಗೆ ಈ ಟ್ಯಾಕ್ಸ್ ಅಗತ್ಯವಾಗಿದ್ದು, ಸಂಗ್ರಹಗೊಂಡ ತೆರಿಗೆಯನ್ನು ಹವಾಮಾನ ಸಂಬಂಧಿತ ಅಪಾಯಗಳನ್ನು ಎದುರಿಸುತ್ತಿರುವ ಪುಟ್ಟ ರಾಷ್ಟ್ರಗಳ ಸಹಾಯಕ್ಕೆ ಒದಗಿಸಲು IMO ನಿರ್ಧರಿಸಿದೆ.
ಹಡಗಲ್ಲಿ 12 ಶತಕೋಟಿ ಟನ್ ಸರಕು ಸಾಗಾಟ!
ಜಾಗತಿಕ ವ್ಯಾಪಾರದಲ್ಲಿ ಹಡಗುಗಳು ಪ್ರಮುಖ ಪಾತ್ರವಹಿಸುತ್ತವೆ. ಹಡಗುಗಳನ್ನು ಬಳಸಿ ವಾರ್ಷಿಕವಾಗಿ ಸಮುದ್ರ ಮಾರ್ಗದಲ್ಲಿ 12 ಶತಕೋಟಿ ಟನ್ ಸರಕು ಸಾಗಾಟ ಮಾಡಲಾಗುತ್ತದೆ. ಇದರಿಂದ ಸುಮಾರು 1000 ಮೆಟ್ರಿಕ್ ಟನ್ ಪ್ರಮಾಣದ ಇಂಗಾಲ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.
ಇಂಗಾಲ ಟ್ಯಾಕ್ಸ್‌ಗೆ ಭಾರತದ ಬೆಂಬಲ
ಭಾರತವು ಹಡಗು ಸಾಗಣೆಯ ಮೇಲಿನ ಇಂಗಾಲದ ತೆರಿಗೆಯ ಪರವಾಗಿ ಮತ ಚಲಾಯಿಸಿದೆ. ಈ ಮೂಲಕ ಪರ್ಯಾಯ ಇಂಧನದ ವ್ಯವಸ್ಥೆಯನ್ನು ಭಾರತ ಬೆಂಬಲಿಸಿದೆ. ಇತರ 62 ದೇಶಗಳು ಸಹ ಈ ತೆರಿಗೆಯ ಪರವಾಗಿ ಮತ ಚಲಾಯಿಸಿವೆ. ಅಂತರರಾಷ್ಟ್ರೀಯ ಹವಾಮಾನ ನೀತಿಗೆ ಈ ಒಪ್ಪಂದವ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ. ಆದರೆ ಈ ನೀತಿ ಅಭಿವೃದ್ಧಿಶೀಲ ರಾಷ್ಟ್ರಗಳ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ.
ಸೌದಿ ಅರೇಬಿಯಾ, ಯುಎಇ, ರಷ್ಯಾ ಮತ್ತು ವೆನೆಜುವೆಲಾ ಸೇರಿದಂತೆ 16 ತೈಲ-ಸಮೃದ್ಧ ರಾಷ್ಟ್ರಗಳು ಈ ತೆರಿಗೆ ನೀತಿಯನ್ನು ವಿರೋಧಿಸುತ್ತಿವೆ. ಅಮೆರಿಕದ ನಿಯೋಗವು ಮಾತುಕತೆಗಳಲ್ಲಿ ಸಹ ಭಾಗವಹಿಸಿಲ್ಲ. ಅಲ್ಲದೇ ಮತದಾನದ ಸಮಯದಲ್ಲಿ ಗೈರಾಗಿತ್ತು. ಇನ್ನೂ ಪೆಸಿಫಿಕ್, ಕೆರಿಬಿಯನ್, ಆಫ್ರಿಕಾ ಮತ್ತು ಮಧ್ಯ ಅಮೆರಿಕದಿಂದ ಬಂದ 60ಕ್ಕೂ ಹೆಚ್ಚು ದೇಶಗಳ ನಿಯೋಗ ಆದಾಯದ ಒಂದು ಪಾಲನ್ನು ಹವಾಮಾನ ಸುಧಾರಣೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿದ್ದವು.
ಹಡಗು ಉದ್ಯಮ ಇಂಗಾಲದ ಹೊರಸೂಸುವಿಕೆಯ 3% ರಷ್ಟನ್ನು ಹೊಂದಿದೆ. ಹಡಗುಗಳ ಹೊರಸೂಸುವಿಕೆ ಪ್ಯಾರಿಸ್ ಒಪ್ಪಂದದಲ್ಲಿ ಬರದೇ ಇರುವುದರಿಂದ ಈ ತೆರಿಗೆ ಮಹತ್ವವನ್ನು ಪಡೆದಿದೆ.
ಏನಿದು ಪ್ಯಾರಿಸ್ ಹವಾಮಾನ ಒಪ್ಪಂದ?
ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಸಲುವಾಗಿ ಹಲವು ದೇಶಗಳು ಒಪ್ಪಿಕೊಂಡು ಮಾಡಿಕೊಂಡ ಒಪ್ಪಂದವಿದು. 2015ರ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸುಮಾರು 200ಕ್ಕೂ ಅಧಿಕ ದೇಶಗಳು ಒಗ್ಗೂಡಿ, ಒಪ್ಪಂದವನ್ನು ಅಂಗೀಕರಿಸಿದವು. 2016ರ ನವೆಂಬರ್ 4ರಂದು ಒಪ್ಪಂದವನ್ನು ಜಾರಿಗೆ ತರಲಾಯಿತು.
ಜಾಗತಿಕ ತಾಪಮಾನವನ್ನು ಮುಂದಿನ 2050ರ ವೇಳೆಗೆ 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ, 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವುದು ಒಪ್ಪಂದದ ಗುರಿಯಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವುದು ಒಪ್ಪಂದದ ಆದ್ಯತೆಯಾಗಿದೆ. ಒಪ್ಪಂದದ ಪ್ರಕಾರ ಪ್ರತಿಯೊಂದು ದೇಶವು ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ನಿರ್ದಿಷ್ಟ ಗುರಿಯನ್ನು ಹೊಂದಿಸಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಇದರ ಪರಿಶೀಲನೆ ನಡೆಸಬೇಕು. ಶ್ರೀಮಂತ ದೇಶಗಳು ಬಡ ದೇಶಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಮಾಡಲು ‘ಹವಾಮಾನ ಹಣಕಾಸು’ ಎಂದು ಕರೆಯಲಾಗುವ ಹಣಕಾಸು ಸಹಾಯವನ್ನು ಒದಗಿಸಬೇಕು ಎಂಬುದು ಒಪ್ಪಂದದ ನಿಯಮವಾಗಿದೆ. ಭಾರತ ಈ ಒಪ್ಪಂದಕ್ಕೆ ಬೆಂಬಲ ಸೂಚಿಸಿದ್ದು, ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿದೆ.