ಆಸ್ಟ್ರೇಲಿಯಾದ (Australia) ಮೊನಾಶ್ ವಿಶ್ವವಿದ್ಯಾನಿಲಯದ ಸಂಶೋಧಕರು ವಿಶ್ವದ ಮೊದಲ ಬಯೋನಿಕ್ ಕಣ್ಣುಗಳನ್ನು (Bionic Eye) ಅಭಿವೃದ್ಧಿಪಡಿಸಿದ್ದಾರೆ. ‘ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್’ ಎಂದು ಕರೆಯಲ್ಪಡುವ ಈ ಆವಿಷ್ಕಾರವು ಕುರುಡುತನದಿಂದ ಬಳಲುತ್ತಿರುವ ಕೋಟ್ಯಂತರ ಜನರಿಗೆ ಭರವಸೆಯ ಬೆಳಕಾಗಿದೆ.
ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಅಂಧರಿಗೆ ದೃಷ್ಟಿಯನ್ನು ನೀಡಲಿದೆ. ಈ ಮೂಲಕ ದೃಷ್ಟಿ ಹೀನರ ಬಾಳಲ್ಲಿ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಈ ತಂತ್ರಜ್ಞಾನ ನೇರವಾಗಿ ಮೆದುಳಿನ (Brain) ದೃಷ್ಟಿ ಕೇಂದ್ರಕ್ಕೆ ಸಂಕೇತಗಳನ್ನು ಕಳುಹಿಸುತ್ತದೆ. ಈ ಮೂಲಕ ವ್ಯಕ್ತಿಗೆ ಚಿತ್ರಗಳನ್ನು ಹಾಗೂ ವಸ್ತುಗಳನ್ನು ಗ್ರಹಿಸಲು ಸಹಕರಿಸುತ್ತದೆ.
Advertisement
ಈ ತಂತ್ರಜ್ಞಾನವನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಅಧ್ಯಯನದಲ್ಲಿ ಭರವಸೆಯ ಫಲಿತಾಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದೀಗ ಬಯೋನಿಕ್ ಕಣ್ಣನ್ನು ಮನುಷ್ಯನ ಮೇಲೆ ಕ್ಲಿನಿಕಲ್ ಪ್ರಯೋಗಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ.
Advertisement
ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ?
Advertisement
ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್ ಒಂದು ದಶಕದ ಸಂಶೋಧನೆಯ ಫಲವಾಗಿದೆ. ಸಾಮಾನ್ಯವಾಗಿ ಕಣ್ಣುಗಳಿಂದ ಮೆದುಳಿಗೆ ದೃಶ್ಯ ಮಾಹಿತಿಯನ್ನು ರವಾನಿಸುವ ಹಾನಿಗೊಳಗಾದ ನರಗಳನ್ನು ಬೈಪಾಸ್ ಮಾಡುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.
Advertisement
ಪ್ರಾಣಿಗಳ ಮೇಲೆ ಯಶಸ್ವಿ ಅಧ್ಯಯನ
ಈ ತಂತ್ರಜ್ಞಾನವನ್ನು ಕುರಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಮನುಷ್ಯನ ಮೇಲಿನ ಪ್ರಯೋಗಗಳು ಯಶಸ್ವಿಯಾದರೆ ವ್ಯಾಪಕವಾಗಿ ಅಳವಡಿಕೆ ಸಾಧ್ಯವಾಗಲಿದೆ.
ದೃಷ್ಟಿ ಮರುಸ್ಥಾಪನೆಗೆ ಇದು ಹೇಗೆ ಸಹಾಯ ಮಾಡುತ್ತದೆ?
ಈ ತಂತ್ರಜ್ಞಾನವು ಮೆದುಳಿಗೆ ವಿದ್ಯುತ್ ಪ್ರಚೋದನೆಯನ್ನು ನೀಡುವ ವೈರ್‌ಲೆಸ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಇದೆ ರೀತಿಯ ಹೆಬ್ಬೆರಳಿನ ಗಾತ್ರದಷ್ಟಿರುವ 11 ಇಂಪ್ಲಾಂಟ್‌ಗಳನ್ನು ಮೆದುಳಿನ ಮೇಲ್ಮೈಯಲ್ಲಿ ಇರಿಸಿ ಈ ಮೂಲಕ ಮೆದುಳಿನ ಕೋಶಗಳನ್ನು ಉತ್ತೇಜಿಸುತ್ತದೆ. ಈ ಮೂಲಕ ಅಂದ ವ್ಯಕ್ತಿಗೆ ದೃಷ್ಟಿ ನೀಡಲು ಇದು ಸಹಕಾರಿಯಾಗಲಿದೆ.
ಇದರಲ್ಲಿದೆ ಮೈಕ್ರೋ ಕ್ಯಾಮೆರಾ!
ಜೆನ್ನಾರಿಸ್ ಉಪಕರಣದಲ್ಲಿ ಒಂದು ಸಣ್ಣ ಕ್ಯಾಮೆರಾ ಇದೆ. ಕ್ಯಾಮೆರಾದಿಂದ ಸೆರೆಹಿಡಿಯಲಾದ ಚಿತ್ರಗಳನ್ನು ಸಂಕೇತಗಳನ್ನು ನಂತರ 11 ಇಂಪ್ಲಾಂಟ್ ಸಾಧನಗಳಿಗೆ ರವಾನಿಸುತ್ತದೆ. ಈ ಮೂಲಕ ಚಿತ್ರಗಳನ್ನು ಮೆದುಳಿನ ದೃಷ್ಟಿ ವಿಭಾಗಕ್ಕೆ ಈ ತಂತ್ರಜ್ಞಾನ ತಲುಪಿಸಲಿದೆ.
ಹೆಚ್ಚು ನೈಸರ್ಗಿಕ ಹಾಗೂ ನೈಜ ದೃಷ್ಟಿ ಅನುಭವವನ್ನು ಇದರಿಂದ ಪಡೆಯಲು ಸಾಧ್ಯವಿದೆ. ಈ ವ್ಯವಸ್ಥೆಯು ಪ್ರಸ್ತುತ ಮಾನವ ಕಣ್ಣಿನ 130-ಡಿಗ್ರಿ ಶ್ರೇಣಿಗಿಂತ ಸ್ವಲ್ಪ ಕಡಿಮೆಯಾದ 100-ಡಿಗ್ರಿ ಕ್ಷೇತ್ರವನ್ನು ಒದಗಿಸುತ್ತದೆ. ಹಿಂದಿನ ಫ್ಲಾಟ್-ಸೆನ್ಸಾರ್ ತಂತ್ರಜ್ಞಾನಗಳು ಕೇವಲ 70-ಡಿಗ್ರಿ ಶ್ರೇಣಿಯನ್ನು ಮಾತ್ರ ನೀಡುತ್ತಿತ್ತು.
ಈ ತಂತ್ರಜ್ಞಾನದಲ್ಲಿ ಹೆಚ್ಚು ಸ್ಪಂದಿಸುವ ನ್ಯಾನೊವೈರ್‌ಗಳ ಬಳಕೆಯು ಚಿತ್ರಗಳನ್ನು ಪ್ರಕ್ರಿಯೆಗೊಳಿಸಲು ಬೇಕಾದ ಸಮಯವನ್ನು ಬಹಳವಾಗಿ ಕಡಿಮೆ ಮಾಡಿದೆ. ಈ ಅದ್ಭುತ ಅಧ್ಯಯನವು ಕುರುಡುತನದ ಚಿಕಿತ್ಸೆಯ ಭವಿಷ್ಯದಲ್ಲಿ ಅತ್ಯಂತ ಪ್ರಯೋಜನಕಾರಿ ಎಂದೆನಿಸಲಿದೆ.
ವಿಶ್ವದಾದ್ಯಂತ ಸುಮಾರು 31 ಕೋಟಿ ಅಂಧರು ಇದ್ದಾರೆ. ಅವರಲ್ಲಿ ಕೆಲವರಿಗೆ ದಾನಿಗಳ ಮೂಲಕ ದೃಷ್ಟಿ ನೀಡುವ ಯತ್ನ ಆಗುತ್ತಿದೆ. ಕೆಲವು ದೇಶಗಳಲ್ಲಿ ಜನರ ತಿಳುವಳಿಕೆ ಹಾಗೂ ಜಾಗೃತಿಯ ಕೊರತೆಯಿಂದ ಕಡಿಮೆ ಜನ ಮಾತ್ರ ಕಣ್ಗಳನ್ನು ದಾನ ಮಾಡುತ್ತಿದ್ದಾರೆ. ಇದೀಗ ನೂತನ ತಂತ್ರಜ್ಞಾನ ಅಂಧರ ಸಂಖ್ಯೆಯನ್ನು ಕಡಿಮೆ ಮಾಡುವ ಭರವಸೆ ಮೂಡಿಸಿದೆ.