ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗ ಮನುಷ್ಯನ ಮೆದುಳಿಗಿದೆ ಎಂಬ ಮಾತಿದೆ. ಅದರಂತೆ ತಂತ್ರಜ್ಞಾನ ಹಾಗೂ ವಿಜ್ಞಾನದಲ್ಲಿ ಪ್ರಗತಿ ಸಾಧಿಸುವ ಗುರಿಯಿಂದ ಮನುಷ್ಯನ ಮೆದುಳಿನ (Human Brain) ಜೀವಕೋಶಗಳನ್ನು ಬಳಸಿ ಸ್ವಿಟ್ಜರ್ಲ್ಯಾಂಡ್‌ನ (Switzerland) ವಿಜ್ಞಾನಿಗಳು ಬಯೋ ಕಂಪ್ಯೂಟರ್ (Biocomputer) ಸಂಶೋಧನೆಗೆ ಮುಂದಾಗಿದ್ದಾರೆ.
ಮಾನವನ ಮೆದುಳು ಕಂಪ್ಯೂಟರ್‌ಗಳಿಗಿಂತ ನಿಧಾನವಾಗಿದ್ದರೂ, ಸಂಕೀರ್ಣ ಮಾಹಿತಿಯನ್ನು ಸಂಸ್ಕರಿಸುವಲ್ಲಿ ಅದು ಯಂತ್ರಗಳನ್ನು ಮೀರಿಸುತ್ತದೆ. ಮನುಷ್ಯನ ಮೆದುಳು ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್‌ಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದ ಜೈವಿಕ ಕಂಪ್ಯೂಟರ್‌ನ ಸಂಶೋಧನೆ ವಿಶ್ವದ ಗಮನ ಸೆಳೆದಿದೆ. ಒಮ್ಮೆ ಬಯೋ ಕಂಪ್ಯೂಟರ್ ಪರಿಪೂರ್ಣವಾಗಿ ಅಸ್ಥಿತ್ವಕ್ಕೆ ಬಂದರೆ ಖಂಡಿತ ವಿಜ್ಞಾನ ಜಗತ್ತಿನಲ್ಲಿ ಮಹತ್ವದ ಬೆಳವಣಿಗೆ ಸಾಧ್ಯವಾಗಲಿದೆ.
ಮೆದುಳಿನ ಕೋಶಗಳ ತಯಾರಿಕೆ ಹೇಗೆ?
ಬಯೋ ಕಂಪ್ಯೂಟರ್‌ಗೆ ಲ್ಯಾಬ್‌ನಲ್ಲಿ ತಯಾರಿಸಿದ ಮಾನವನ ಮೆದುಳಿನ ಕೋಶಗಳ ಗೋಲಾಕಾರದ ಸಮೂಹಗಳನ್ನು ಅಳವಡಿಸಲಾಗಿದೆ. ಒಟ್ಟು 16 ಆರ್ಗನೈಡ್‌ಗಳನ್ನು ನಾಲ್ಕು ವ್ಯೂಹಗಳಲ್ಲಿ ಇರಿಸಿ, ಅದು ಪ್ರತಿ ಎಂಟು ಎಲೆಕ್ಟ್ರೋಡ್‌ಗಳಿಗೆ ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೆದುಳಿನ ಕೋಶಗಳನ್ನು ಲ್ಯಾಬ್‌ನಲ್ಲಿ ಗಾಜಿನ ಜರಡಿಯಲ್ಲಿ ʻಕಲ್ಚರ್ʼ ಮಾಡುವ ಮೂಲಕ ಬೆಳೆಸಿ ತಯಾರಿಸಲಾಗಿದೆ. ಇದನ್ನು ಕಂಪ್ಯೂಟರ್‌ಗಳಿಗೆ ಅಳವಡಿಸಿದ ಬಳಿಕ, ಈ ಜೀವಕೋಶಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಪೂರೈಸುವ ಮೈಕ್ರೋಫ್ಲೂಯಿಡಿಕ್ಸ್ ಸಿಸ್ಟಮ್‌ನ್ನು ಸಹ ಮಾಡಲಾಗಿದೆ.
ವೆಟ್‌ವೇರ್ ಕಂಪ್ಯೂಟಿಂಗ್ ಎಂದರೇನು?
ಬಯೋ ಕಂಪ್ಯೂಟರ್‌ನ ಸಂಶೋಧನೆಯು ವೆಟ್‌ವೇರ್ ಕಂಪ್ಯೂಟಿಂಗ್ ವರ್ಗದ ಅಡಿಯಲ್ಲಿ ಬರುತ್ತದೆ. ಇದು ಜೀವಂತ ಜೀವಿಗಳೊಳಗಿನ ಕಾರ್ಯನಿರ್ವಹಿಸುವ ಮೆದುಳು ಹಾಗೂ ನರಮಂಡಲದಂತೆ ಕೆಲಸ ಮಾಡುತ್ತದೆ. ಇದರಲ್ಲಿ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಜೀವಕೋಶಗಳ ಮಿಶ್ರಣ ಇರಲಿದೆ.
ಫೈನಲ್‌ಸ್ಪಾರ್ಕ್‌ನ ಸಂಶೋಧನೆಯ ಪ್ರಕಾರ ವೆಟ್‌ವೇರ್ ಕಂಪ್ಯೂಟಿಂಗ್ ಕೆಲಸ ನಿರ್ವಹಿಸಲು ಜೀವಂತ ನ್ಯೂರಾನ್‌ಗಳನ್ನು ಬಳಸುತ್ತದೆ. ಈ ಪರಿಕಲ್ಪನೆಯು ಕಂಪ್ಯೂಟರ್‌ನಲ್ಲಿನ ಕೃತಕ ನರ ಜಾಲಗಳನ್ನು (ಎಎನ್‌ಎನ್) ಹೇಗೆ ಬಳಸಲಾಗಿದಿಯೋ ಅದನ್ನೇ ಹೋಲುತ್ತದೆ. ಆದರೂ ಈ ಜೈವಿಕ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
16 ಮಿನಿ-ಬ್ರೈನ್‌ಗಳಿಂದ ತಯಾರಾದ ಬಯೋಕಂಪ್ಯೂಟರ್
ಸ್ವಿಸ್ ಬಯೋಕಂಪ್ಯೂಟಿಂಗ್ ಸ್ಟಾರ್ಟ್ಅಪ್ ಫೈನಲ್‌ಸ್ಪಾರ್ಕ್, ಇತಿಹಾಸದಲ್ಲಿ ಮೊದಲ ಜೀವಂತ ಪ್ರೊಸೆಸರ್‌ನ್ನು ರಚಿಸಲು ಮಾನವನ 16 ಮೆದುಳಿನ ಕೋಶಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ. ಡೇಟಾವನ್ನು ಕಲಿಯುವ ಮತ್ತು ಪ್ರಕ್ರಿಯೆಗೊಳಿಸುವ ಸಾಮರ್ಥ್ಯದೊಂದಿಗೆ ಜೀವಂತ ನ್ಯೂರಾನ್‌ಗಳಿಂದ ಇದು ತಯಾರಾಗಿದೆ. ಸಾಂಪ್ರದಾಯಿಕ ಡಿಜಿಟಲ್ ಪ್ರೊಸೆಸರ್‌ಗಳಿಗಿಂತ ಇದು ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ.
ಕಳೆದ 3 ವಷಗಳಿಂದ 1,000ಕ್ಕೂ ಹೆಚ್ಚು ಮೆದುಳಿನ ಕೋಶಗಳಿಂದ 18 ಟೆರಾಬೈಟ್‌ಗಳಿಗಿಂತ ಹೆಚ್ಚು ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಅಂತರರಾಷ್ಟ್ರೀಯ ಮಟ್ಟದ ಸಹಯೋಗ ಅಗತ್ಯವಾಗಿದೆ ಎಂದು FinalSpark ಸಹ-ಸಂಸ್ಥಾಪಕ ಡಾ. ಫ್ರೆಡ್ ಜೋರ್ಡಾನ್ ಹೇಳಿದ್ದಾರೆ.
ಅಮೆರಿಕ ವಿಜ್ಞಾನಿಗಳಿಂದಲೂ ಬಯೋ ಕಂಪ್ಯೂಟರ್ ಸಂಶೋಧನೆ
ಸ್ವಿಸ್ ವಿಜ್ಞಾನಿಗಳ ಕೈಗೊಂಡ ಪ್ರಯತ್ನವೇನು ಈ ವಿಚಾರದಲ್ಲಿ ಮೊದಲಲ್ಲ. 2023 ರಲ್ಲಿ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಟೆಕ್ನಿಯನ್-ಇಸ್ರೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ಜೈವಿಕ ಅಣುಗಳನ್ನು ಬಳಸಿಕೊಂಡು ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಚಿಸಿದ್ದೇವೆ ಎಂದು ಹೇಳಿಕೊಂಡಿತ್ತು.. ಅದು ಕಂಪ್ಯೂಟರ್ ಹಾರ್ಡ್‌ವೇರ್‌ನ್ನು ಮೆದುಳಿನ ಆರ್ಗನೈಡ್‌ಗಳಿಗೆ ಸಂಪರ್ಕಿಸುತ್ತದೆ. ಇದರೊಂದಿಗೆ ಮಾತಿನ ಮಾದರಿಗಳನ್ನು ಗುರುತಿಸುತ್ತಿದೆ ಎನ್ನಲಾಗಿದೆ.
ಒಟ್ಟಾರೆ ಈ ಸಂಶೋಧನೆ ಯಶಸ್ವಿಯಾದರೆ ಕಂಪ್ಯೂಟರ್ ವಿಜ್ಞಾನದಲ್ಲಿ ಹೊಸ ಕ್ರಾಂತಿಯೊಂದು ನಡೆಯಲಿದೆ.