ನವದೆಹಲಿ: ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಹೊಡೆತದಿಂದಾಗಿ ಜನರು ಮನೆಯಿಂದ ಹೊರ ಬರಲು ನೂರು ಬಾರಿ ಯೋಚಿಸುವಂತಾಗಿದೆ. ಶುಕ್ರವಾರ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ. ಶುಕ್ರವಾರ ಸಂಜೆ 7.30ರ ತಾಪಮಾನವನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ‘El Dordo’ ವೆಬ್‍ಸೈಟ್ ಈ ಪಟ್ಟಿಯನ್ನು ಪ್ರಕಟಿಸಿದೆ.
ಇಎಲ್ ಡೊರಡೋ ವೆಬ್‍ಸೈಟ್ ಜಗತ್ತಿನ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳು ಭಾರತದಲ್ಲಿದೆ ಎಂದು ಹೇಳಿದೆ. ಈ 15 ನಗರಗಳು ಮಧ್ಯ ಭಾರತ ಮತ್ತು ಆಸುಪಾಸಿನಲ್ಲಿವೆ. ಮೊದಲ ಸ್ಥಾನವನ್ನು ಮಧ್ಯ ಪ್ರದೇಶದ ಖರಗೋನ್ ನಗರ ಪಡೆದಿದೆ. ಇಲ್ಲಿ 46.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
Advertisement
Advertisement
15 ನಗರಗಳು ಎಲ್ಲಿವೆ?
15 ನಗರಗಳ ಪೈಕಿ 9 ಮಹಾರಾಷ್ಟ್ರ, 3 ಮಧ್ಯ ಪ್ರದೇಶ, 2 ಉತ್ತರ ಪ್ರದೇಶ ಮತ್ತು ಒಂದು ನಗರ ತೆಲಂಗಾಣದಲ್ಲಿದೆ. ಮಧ್ಯ ಪ್ರದೇಶದ ಖರಗೋನ್ (46.6), ಮಹಾರಾಷ್ಟ್ರದ ಅಕೋಲಾ (46.6), ಬ್ರಹ್ಮಪುರಿ (45.8), ಪರ್ಭಾನಿ (45.7) ಮತ್ತು ವಾರ್ಧಾ (45.7) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.
Advertisement
ಮಹಾರಾಷ್ಟ್ರದ ಚಂದ್ರಾಪುರದ ವೈಲ್ಡ್ ಲೈಫ್ ಎನ್‍ಜಿಓ (Habitat Conservation Society) ಪ್ರಕಾರ, ನಗರದ 15 ಕಿ.ಮೀ. ಅಸುಪಾಸಿನಲ್ಲಿ ಸುಮಾರು ಬಿಸಿಲಿನ ಝಳಕ್ಕೆ 9 ಪಕ್ಷಿಗಳು ಮೃತಪಟ್ಟಿವೆ. ಕಲ್ಲಿದ್ದಲು ಗಣಿಗಾರಿಕೆ, ಶಾಖೋತ್ಪನ್ನ ಘಟಕ ಹಾಗೂ ಇತರೆ ಕೈಗಾರಿಕೆಗಳು ಇಲ್ಲಿ ಕೇಂದ್ರಿಕೃತವಾಗಿದ್ದರಿಂದ ತಾಪಮಾನದ ಹೆಚ್ಚಳವಾಗಲು ಕಾರಣವಾಗಿದೆ. ಇದೆಲ್ಲದರ ನೇರ ಪರಿಣಾಮ ಪಕ್ಷಿಗಳ ಮೇಲೆ ಉಂಟಾಗುತ್ತಿದೆ ಎಂದು ತಿಳಿಸಿದೆ.
Advertisement
ಅಕೋಲಾ, ಅಮರಾವತಿ, ಚಂದ್ರಾಪುರ, ನಾಗ್ಪುರ, ಯವತ್ಮಾಲ ಮತ್ತು ವಾರ್ಧಾ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿಗಾಳಿ ಬೀಸಲಿದೆ. ಈ ಜಿಲ್ಲೆಗಳಲ್ಲಿ ಅಂದಾಜು 45-47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.