ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ಈ ದಿನ ನೀರಿನ ಮಹತ್ವವನ್ನು ಸಾರುವುದು ಮತ್ತು ಜಲ ಸಂರಕ್ಷಣೆಯ ಅಗತ್ಯವನ್ನು ಜನರಿಗೆ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನೀರು ಅತ್ಯಂತ ಅನಿವಾರ್ಯ ವಸ್ತುವಾಗಿದೆ. ಕುಡಿಯುವ ನೀರಿನಿಂದ ಹಿಡಿದು, ಅಡುಗೆ, ಸ್ವಚ್ಛತೆ ಮತ್ತು ಕೃಷಿ ಕಾರ್ಯಗಳಿಗೆ ನೀರು ಅವಶ್ಯಕವಾಗಿದೆ. ಆದರೆ, ಮಾನವನ ಅತಿಯಾದ ಬಳಕೆ ಮತ್ತು ಪರಿಸರ ನಾಶದಿಂದ ಜಲ ಸಂಪತ್ತು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶವನ್ನು ಹರಡುವುದು ಅತ್ಯಂತ ಮುಖ್ಯವಾಗಿದೆ. ನಮ್ಮ ಗ್ರಹವು 70%ಕ್ಕಿಂತ ಹೆಚ್ಚು ನೀರನ್ನು ಹೊಂದಿದ್ದರೂ, ಅದರಲ್ಲಿ ಸುಮಾರು 2.5% ಮಾತ್ರ ಸಿಹಿನೀರು, ಮತ್ತು 1% ಕ್ಕಿಂತ ಕಡಿಮೆ ನೀರು ಮಾನವ ಬಳಕೆಗೆ ನೇರವಾಗಿ ಲಭ್ಯವಿದೆ. ಆದರೆ ನಿರಂತರ ಜನಸಂಖ್ಯಾ ಬೆಳವಣಿಗೆ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದಾಗಿ ಜಲ ಸಂಪನ್ಮೂಲದ ಮೇಲೆ ತ್ರೀವ ಒತ್ತಡ ಉಂಟಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ವಿಶ್ವ ಜಲ ದಿನ ಪ್ರಮುಖ ಪಾತ್ರವಹಿಸುತ್ತವೆ.
ಇತಿಹಾಸ:
ವಿಶ್ವ ಜಲ ದಿನದ ಆಚರಣೆಯು 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಶಿಫಾರಸ್ಸು ಮಾಡಲ್ಪಟ್ಟಿತು. ಅದಾದ ಬಳಿಕ, 1993ರಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷದ ವಿಶ್ವ ಜಲ ದಿನಕ್ಕೆ ವಿಭಿನ್ನ ವಿಷಯಗಳನ್ನು ಆಯ್ಕೆ ಮಾಡಲಾಗುತ್ತದೆ, ಉದಾಹರಣೆಗೆ, 2024ರಲ್ಲಿ ‘ಜಲದಿಂದ ಶಾಂತಿ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿತ್ತು. ಹಾಗೆಯೇ ಈ ಬಾರಿ ʻಹಿಮನದಿ ಸಂರಕ್ಷಣೆʼಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ನೀರಿನ ಅತಿಯಾದ ಬಳಕೆ ಮತ್ತು ದುರುಪಯೋಗದಿಂದ ನೀರಿನ ಕೊರತೆ ಉಂಟಾಗುತ್ತಿದೆ. ಇದು ಪರಿಸರ, ಆರ್ಥಿಕತೆ ಮತ್ತು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜಲ ಸಂರಕ್ಷಣೆಯ ಮಹತ್ವವನ್ನು ತಿಳಿದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೀರಿನ ಬಳಕೆಯನ್ನು ಮಿತಗೊಳಿಸಬೇಕು. ನೀರಿನ ಪುನರ್ಬಳಕೆ, ಮಳೆನೀರು ಸಂಗ್ರಹಣೆ, ಮತ್ತು ಜಲಮೂಲಗಳ ಸಂರಕ್ಷಣೆ ಮೂಲಕ ನಾವು ಜಲ ಸಂರಕ್ಷಣೆಗೆ ಸಹಕರಿಸಬೇಕು ಹಾಗೂ ಇದು ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ. ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶಾಲಾ-ಕಾಲೇಜುಗಳಲ್ಲಿ ನೀರಿನ ಮಹತ್ವದ ಬಗ್ಗೆ ಉಪನ್ಯಾಸಗಳು, ಮತ್ತು ಸಾರ್ವಜನಿಕ ಸಭೆಗಳು ಜಲ ದಿನದ ಅಂಗವಾಗಿ ಆಯೋಜಿಸಲಾಗುತ್ತವೆ. ಇವು ಜನರಲ್ಲಿ ಜಲ ಸಂರಕ್ಷಣೆಯ ಅಗತ್ಯವನ್ನು ತಿಳಿಸುವಲ್ಲಿ ಸಹಾಯಕವಾಗುತ್ತವೆ. ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದರಿಂದ, ಜಲ ಸಂರಕ್ಷಣೆಯಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು. ಆದ್ದರಿಂದ, ಜಲ ದಿನದ ಆಚರಣೆ ನಮ್ಮ ಹೊಣೆಗಾರಿಕೆಯನ್ನು ನೆನಪಿಸುವ ಒಂದು ಅವಕಾಶವಾಗಿದೆ.
ಜಲ ಸಂಪನ್ಮೂಲಗಳು ಎದುರಿಸುತ್ತಿರುವ ಸವಾಲುಗಳು:
* ನದಿಗಳು, ಸರೋವರಗಳು ಮತ್ತು ಸಾಗರಗಳು ಪ್ಲಾಸ್ಟಿಕ್ ಬಾಟಲಿಗಳು, ಹೊದಿಕೆಗಳು ಮತ್ತು ಇತರ ಅವಶೇಷಗಳಿಂದ ಹಾಳಾಗುತ್ತಿವೆ, ಇದು ಅವುಗಳ ನೋಟವನ್ನು ಹಾಳು ಮಾಡುವುದಲ್ಲದೆ, ಅವುಗಳನ್ನು ಅವಲಂಬಿಸಿರುವ ಸಸ್ಯ, ಪ್ರಾಣಿ ಮತ್ತು ಮಾನವ ಸಮುದಾಯಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದೆ.
* ಕೈಗಾರಿಕಾ, ಕೃಷಿ ಮತ್ತು ಗೃಹಬಳಕೆಯ ಮಾಲಿನ್ಯಕಾರಕಗಳು ಜಲಮೂಲಗಳಿಗೆ ನುಗ್ಗಿ, ಅವುಗಳನ್ನು ಬಳಕೆಗೆ ಅಸುರಕ್ಷಿತವಾಗಿಸುತ್ತದೆ ಮತ್ತು ಜಲಚರ ಪರಿಸರ ವ್ಯವಸ್ಥೆಗಳಿಗೆ ಹಾನಿಕಾರಕವಾಗಿದೆ.
* ಕೃಷಿ ನೀರಾವರಿ, ಕೈಗಾರಿಕಾ ಪ್ರಕ್ರಿಯೆಗಳು ಮತ್ತು ದೈನಂದಿನ ಮಾನವ ಬಳಕೆಯಿಂದಾಗಿ ನೀರಿನ ಸಂಪನ್ಮೂಲಗಳು ಒತ್ತಡಕ್ಕೊಳಗಾಗುತ್ತಿವೆ. ಹೆಚ್ಚುತ್ತಿರುವ ತಾಪಮಾನ ಮತ್ತು ಅನಿಯಮಿತ ಮಳೆ ತೀವ್ರ ಬರಗಾಲಕ್ಕೆ ಕಾರಣವಾಗುತ್ತವೆ,
* ಕೆಲವು ಪ್ರದೇಶಗಳು ದೀರ್ಘಕಾಲದ ಬರಗಾಲವನ್ನು ಎದುರಿಸುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳು ಹೆಚ್ಚಿದ ಮಳೆ ಮತ್ತು ಪ್ರವಾಹವನ್ನು ಎದುರಿಸುತ್ತಿದ್ದು, ಮಣ್ಣಿನ ಸವೆತ ಮತ್ತು ನೀರಿನ ಮೂಲ ಮಾಲಿನ್ಯದಂತಹ ಸವಾಲುಗಳು ಹೆಚ್ಚಾಗುತ್ತದೆ
* ಕಲುಷಿತ ನೀರಿನ ಮೂಲಗಳು ವ್ಯಾಪಕ ಅನಾರೋಗ್ಯ ಮತ್ತು ರೋಗಕ್ಕೆ ಕಾರಣವಾಗುವುದರಿಂದ ಬಡತನ ಮತ್ತು ಅನಾರೋಗ್ಯದ ಸಮಸ್ಯೆಗಳನ್ನು ಶಾಶ್ವತಗೊಳಿಸುತ್ತದೆ.
* ಮಾನವ ನೀರಿನ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾದ ಅಣೆಕಟ್ಟುಗಳು ಮತ್ತು ನದಿ ತಿರುವುಗಳಂತಹ ಮೂಲಸೌಕರ್ಯ ಯೋಜನೆಗಳು ಪರಿಸರ ವ್ಯವಸ್ಥೆಗಳನ್ನು ಅಡ್ಡಿಪಡಿಸಬಹುದು, ಆ ನೀರಿನ ಮೂಲಗಳನ್ನು ಅವಲಂಬಿಸಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಅಪಾಯವನ್ನುಂಟುಮಾಡಬಹುದು.
ಮಾನವ ಬೇಡಿಕೆ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನವನ್ನು ಸಾಧಿಸಲು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣಾ ಪದ್ಧತಿಗಳನ್ನು ಪಡೆದುಕೊಳ್ಳಲು ನಿಖರವಾದ ಯೋಜನೆ ಮತ್ತು ಸಹಯೋಗದ ಪ್ರಯತ್ನ ಬೇಕಾಗುತ್ತವೆ. ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಮೂಲಕ, ಭವಿಷ್ಯದಲ್ಲಿ ಎಲ್ಲರಿಗೂ ಶುದ್ಧ ಮತ್ತು ಸುರಕ್ಷಿತ ನೀರು ಲಭ್ಯವಾಗುವಂತೆ ಮಾಡಿಕೊಳ್ಳಬಹುದು.
ವಿಶ್ವ ಜಲ ದಿನದ ಮಹತ್ವ
ಜಗತ್ತಿನ ಅನೇಕ ಭಾಗಗಳಲ್ಲಿ ಇಂದಿಗೂ ಕುಡಿಯುವ ನೀರಿನ ಕೊರತೆ ಇದೆ. ಕುಡಿಯುವ ನೀರು ಇಲ್ಲದ ಕಾರಣ ಲಕ್ಷಾಂತರ ಜನರು ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತಡೆಯಲು, ನೀರಿನ ಸುಸ್ಥಿರ ಬಳಕೆ, ಮಳೆನೀರು ಸಂಗ್ರಹಣೆ ಮತ್ತು ನೀರಿನ ನಾಶವನ್ನು ತಪ್ಪಿಸುವ ನಿಟ್ಟಿನಲ್ಲಿ ಜಾಗೃತಿ ಉಂಟುಮಾಡುವುದು ಅವಶ್ಯಕವಾಗಿದೆ. ವಿಶ್ವ ಜಲ ದಿನವು ಈ ವಿಷಯಗಳನ್ನು ತಲುಪಿಸಲು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪರಿಸರ ಸಮತೋಲನಕ್ಕಾಗಿ ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ನೀರಿನ ಕೆರೆ, ನದಿಗಳು, ಭೂಗರ್ಭ ಜಲ ಸಂಪತ್ತು ಹೀಗೆ ಅನೇಕ ಜಲ ಮೂಲಗಳು ಇಂದಿಗೂ ಅಪಾಯದಲ್ಲಿವೆ. ಕೈಗಾರಿಕೆಗಳ ಅಪಾಯಕಾರಿ ತ್ಯಾಜ್ಯ, ಅತಿಯಾದ ಭೂಗರ್ಭ ಜಲ ಶೋಷಣೆ ಮತ್ತು ನೀರಿನ ದುರ್ಬಳಕೆ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ.
ಜಲ ಸಂರಕ್ಷಣೆಯ ಪ್ರಯತ್ನದಲ್ಲಿ ಸರ್ಕಾರ ಮತ್ತು ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. ನೀರಿನ ಸರಬರಾಜು ವ್ಯವಸ್ಥೆಯ ಸುಧಾರಣೆ, ಜಲಮೂಲಗಳ ನಿರ್ವಹಣೆ ಮತ್ತು ನೀರಿನ ಗುಣಮಟ್ಟದ ನಿಯಂತ್ರಣದಲ್ಲಿ ಸರ್ಕಾರಗಳು ಮುಖ್ಯ ಪಾತ್ರವಹಿಸಬೇಕು. ಸಾಮಾಜಿಕ ಸಂಸ್ಥೆಗಳು ಮತ್ತು ಎನ್‌ಜಿಒಗಳು ಜಲ ಸಂರಕ್ಷಣೆಯ ಜಾಗೃತಿ ಮೂಡಿಸಲು ಮತ್ತು ಸಮುದಾಯ ಮಟ್ಟದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಸಹಕರಿಸಬಹುದು. ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ಜಲ ಸಂರಕ್ಷಣೆಯಲ್ಲಿ ಯಶಸ್ಸನ್ನು ಸಾಧಿಸಬಹುದು. ಜಲ ದಿನದ ಅಂಗವಾಗಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಲ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ. ಇವು ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ಪ್ರಪಂಚದ ಪ್ರತಿಯೊಬ್ಬರೂ ನೀರಿನ ಸಂರಕ್ಷಣೆ ಮತ್ತು ಸಂವರ್ಧನೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು. ಪ್ರತಿ ಹನಿ ನೀರಿನ ಮಹತ್ವವನ್ನು ಅರಿತು, ಜಾಗೃತಿಯಿಂದ ನೀರಿನ ಬಳಕೆಯನ್ನು ಮಾಡುವುದು ನಮ್ಮ ಕರ್ತವ್ಯ. ವಿಶ್ವ ಜಲ ದಿನದ ಮಹತ್ವವನ್ನು ಅರ್ಥೈಸಿಕೊಂಡು, ಅದನ್ನು ಜೀವನದ ಭಾಗವಾಗಿಸೋಣ!