– ‘ಬಿಕ್ಕಟ್ಟು ಅಥ್ವಾ ಯುದ್ಧ ಆದ್ರೆ’; 32 ಪುಟಗಳ ಕಿರುಪುಸ್ತಕ ರಿಲೀಸ್
– ಜನರಿಗೆ ಲಕ್ಷ ಲಕ್ಷ ಪ್ರತಿ ಹಂಚುತ್ತಿರುವ ಪುಸ್ತಕದಲ್ಲೇನಿದೆ?
ವಿಶ್ವದಲ್ಲಿ ಮೂರನೇ ಮಹಾಯುದ್ಧ (World War 3) ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ ರಷ್ಯಾ-ಉಕ್ರೇನ್ ಯುದ್ಧ ಮತ್ತೊಂದೆಡೆ ಇಸ್ರೇಲ್-ಇರಾನ್ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಯುದ್ದೋನ್ಮಾದ ಹೆಚ್ಚುತ್ತಿದೆ. ಒಬ್ಬರ ಮೇಲೊಬ್ಬರು ಹಗೆಯ ಶಸ್ತಾçಸ್ತçಗಳನ್ನು ಪ್ರಯೋಗಿಸುತ್ತಿದ್ದಾರೆ. ಪರಮಾಣು ಯುದ್ಧವಾದರೆ ಏನಾಗುತ್ತದೆಯೋ ಎಂಬ ಆತಂಕ ಜಗತ್ತಿನ ರಾಷ್ಟ್ರಗಳಲ್ಲಿ ಮನೆಮಾಡಿದೆ. 3ನೇ ಮಹಾಯುದ್ಧ ಊಹಿಸುವುದು ಬಲು ಕಷ್ಟ. ಜಗತ್ತಿನಲ್ಲಿ ಗತಿಸಿದ ಎರಡು ಮಹಾಯುದ್ಧಗಳಿಂದ ಸತ್ತವರ ಸಂಖ್ಯೆ ಅದೆಷ್ಟೋ. ದಶಕಗಳ ಹಿಂದೆ ಅಣುಬಾಂಬ್ ದಾಳಿಗೆ ತುತ್ತಾದ ನಗರಗಳು ಈಗಲೂ ಅದರ ಪರಿಣಾಮ ಎದುರಿಸುತ್ತಿವೆ. ಲಕ್ಷಾಂತರ ಜನರ ಮಾರಣಹೋಮ, ಬದುಕಿದವರ ಡೋಲಾಯಮಾನ ಸ್ಥಿತಿ, ಬಿಕ್ಕಟ್ಟುಗಳ ಸರಮಾಲೆ, ಅಸ್ತಿತ್ವದ ಪ್ರಶ್ನೆ ಎಲ್ಲವೂ ಕಾಡುತ್ತದೆ. ಮಾನವಪ್ರೇರಿತ ದುರಂತಗಳು ಜಗತ್ತನ್ನು ವಿನಾಶದ ಅಂಚಿಗೆ ನೂಕುತ್ತವೆ. ಈಗ ಮತ್ತದೇ ಯುದ್ಧದ ಕಾರ್ಮೋಡದ ಭೀತಿ ಆವರಿಸಿದೆ.
Advertisement
ರಷ್ಯಾ-ಉಕ್ರೇನ್ ಯುದ್ಧ ಭರ್ತಿ 1,000 ದಿನ ಪೂರೈಸಿದೆ. ಈ ಹೊತ್ತಿನಲ್ಲಿ, ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕರೆ ನೀಡಿದರು. ಅದರಂತೆ ರಷ್ಯಾ ಮೇಲೆ ಉಕ್ರೇನ್ ಕ್ಷಿಪಣಿಗಳನ್ನು ಪ್ರಯೋಗಿಸಿತು. ಇತ್ತ ಪರಮಾಣು ದಾಳಿಗಳಿಗೆ ಇದ್ದ ಬಿಗಿ ನಿಯಮಗಳನ್ನು ಸಡಿಲಗೊಳಿಸುವ ನೀತಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಮತ್ತೊಂದು ಕಡೆ ಇಸ್ರೇಲ್-ಇರಾನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳು 3ನೇ ಮಹಾಯುದ್ಧ ಸಾಧ್ಯತೆಯ ಆತಂಕ ಮೂಡಿಸಿವೆ. ಇದರ ನಡುವೆ ಅದಾಗಲೇ ಕೆಲವು ರಾಷ್ಟçಗಳು ಯುದ್ಧದ ಪರಿಣಾಮಗಳನ್ನು ಮೆಟ್ಟಿ ನಿಲ್ಲಲು ತಮ್ಮ ನಾಗರಿಕರಿಗೆ ಎಚ್ಚರಿಕೆ ಕರೆ ನೀಡಿವೆ. ಯುದ್ಧ ನಡೆದು ಬಿಕ್ಕಟ್ಟು ತಲೆದೋರಿದರೆ ಅದನ್ನು ಹೇಗೆ ಎದುರಿಸಬೇಕು ಎಂದು ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಹೆಚ್ಚಿದ ಭದ್ರತಾ ಬೆದರಿಕೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಮಧ್ಯೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ತಮ್ಮ ನಾಗರಿಕರನ್ನು ಯುದ್ಧದಿಂದಾಗುವ ಸಂಭಾವ್ಯ ಬಿಕ್ಕಟ್ಟುಗಳಿಗೆ ಸಿದ್ಧರಾಗುವಂತೆ ಸೂಚಿಸಿದೆ.
Advertisement
ಬಿಕ್ಕಟ್ಟು ಅಥವಾ ಯುದ್ಧ ಆದ್ರೆ?
ಸ್ವೀಡನ್‌ನ (Sweden) ಮಾಜಿ ಸೇನಾ ಮುಖ್ಯಸ್ಥ ಮೈಕೆಲ್ ಬೈಡೆನ್ ಈಚೆಗೆ ಒಂದು ಕರೆ ನೀಡಿದ್ದರು. ‘ಸ್ವೀಡನ್ ಜನತೆ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧರಾಗಬೇಕು’ ಎಂದು ಹೇಳಿದ್ದರು. ಇದನ್ನು ಸರ್ಕಾರ ಅಭಿಯಾನವಾಗಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ, ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ದೇಶಗಳು ‘ಬಿಕ್ಕಟ್ಟು ಅಥವಾ ಯುದ್ಧ ನಡೆದರೆ’ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಹೊರತಂದಿದೆ. ಅದನ್ನು ತಮ್ಮ ನಾಗರಿಕರಿಗೆ ಲಕ್ಷ ಲಕ್ಷ ಪ್ರತಿಗಳನ್ನಾಗಿ ಮುದ್ರಿಸಿ ಹಂಚುತ್ತಿದೆ. ಸುಮಾರು 32 ಪುಟಗಳ ಈ ಕಿರುಪುಸ್ತಕವು ಯುದ್ಧದಂತಹ ಬಿಕ್ಕಟ್ಟಿನ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಮುನೆಚ್ಚರಿಕೆಯಾಗಿ ಏನೇನು ಕ್ರಮಕೈಗೊಳ್ಳಬೇಕು ಎಂಬುದರ ಸಾರವನ್ನು ಒಳಗೊಂಡಿದೆ. ನಿಜಕ್ಕೂ ಅದರಲ್ಲಿರುವ ಅಂಶಗಳು ಕುತೂಹಲಕರಿಯಾಗಿವೆ.
Advertisement
ಸ್ವೀಡನ್ ಬಿಕ್ಕಟ್ಟಿನ ಬುಕ್‌ಲೆಟ್ ಲಕ್ಷ ಲಕ್ಷ ಹಂಚಿಕೆ
ಸ್ವೀಡಿಷ್ ಸಿವಿಲ್ ಕಾಂಟಿಎಜೆನ್ಸಿಸ್ ಏಜೆನ್ಸಿ (ಎಂಎಸ್‌ಬಿ), ‘ಬಿಕ್ಕಟ್ಟು ಅಥವಾ ಯುದ್ಧ ಬಂದರೆ’ ಶೀರ್ಷಿಕೆಯ ಬಿಕ್ಕಟ್ಟಿನ ಸನ್ನದ್ಧತೆಯ ಕಿರುಪುಸ್ತಕದ ಆವೃತ್ತಿಯನ್ನು ಐದು ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿತರಿಸಲು ಪ್ರಾರಂಭಿಸಿದೆ. ಸ್ವೀಡನ್ 2ನೇ ಮಹಾಯುದ್ಧದಲ್ಲಿ ಇದೇ ರೀತಿ ತನ್ನ ನಾಗರಿಕರಿಗಾಗಿ ಐದು ಬಾರಿ ಕರಪತ್ರಗಳನ್ನು ಹಂಚಿತ್ತು. ಅದನ್ನು ನವೀಕರಿಸಿ ಕಿರುಪುಸ್ತಕ ಬಿಡುಗಡೆ ಮಾಡಿದೆ. ವಿಶ್ವ ಸಮರ 3 ರ ಜೊತೆಗೆ ಎದುರಾಗಬಹುದಾದ ಸೈಬರ್ ದಾಳಿಗಳು, ಭಯೋತ್ಪಾದನೆ ಮತ್ತು ಹವಾಮಾನ ವೈಪರಿತ್ಯದಂತಹ ಸಮಕಾಲೀನ ಸಮಸ್ಯೆಗಳಿಗೆ ಸಜ್ಜಾಗಲು ಕಿರುಪುಸ್ತಕದಲ್ಲಿ ತಿಳಿಸಲಾಗಿದೆ. ಎಂಎಸ್‌ಬಿ ನಿರ್ದೇಶಕ ಮೈಕೆಲ್ ಫ್ರಿಸೆಲ್ ಅವರು ಪುಸ್ತಕದಲ್ಲಿ ವಿವರ ನೀಡಿದ್ದಾರೆ. ‘ಭದ್ರತಾ ಪರಿಸ್ಥಿತಿಯು ಗಂಭೀರವಾಗಿದೆ. ನಾವೆಲ್ಲರೂ ವಿವಿಧ ಬಿಕ್ಕಟ್ಟುಗಳು ಮತ್ತು ಅಂತಿಮವಾಗಿ ಯುದ್ಧವನ್ನು ಎದುರಿಸಲು ನಮ್ಮ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬೇಕಾಗಿದೆ’ ಎಂದು ಕರೆ ನೀಡಿದ್ದಾರೆ.
Advertisement
ಕಿರುಪುಸ್ತಕದಲ್ಲಿ ಏನಿದೆ?
ನೀರು, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದು, ವಿದ್ಯುತ್ ಮತ್ತು ಸಂವಹನ ಕಡಿತಕ್ಕೆ ಈಗಲಿಂದಲೇ ತಯಾರಿ ಮಾಡುವುದು, ಬಿಕ್ಕಟ್ಟಿನ ಸಮಯದಲ್ಲಿ ಆತಂಕವನ್ನು ನಿಭಾಯಿಸುವುದು, ಶಿಶುಗಳಿಗಾಗಿ ಆಹಾರ ಮತ್ತು ಔಷಧಿಗಳನ್ನು ಸಂರಕ್ಷಿಸುವುದು, ತುರ್ತು ಸಂದರ್ಭಗಳಲ್ಲಿ ಸಾಕುಪ್ರಾಣಿಗಳ ಆರೈಕೆಯನ್ನು ಖಾತ್ರಿಪಡಿಸುವುದು ಮುಂತಾದ ಪ್ರಾಯೋಗಿಕ ಸಲಹೆಯನ್ನು ಕಿರುಪುಸ್ತಕ ನೀಡಿದೆ. ಜೊತೆಗೆ, ರಾಷ್ಟ್ರೀಯ ಏಕತೆ ಮತ್ತು ಪ್ರತಿರೋಧವನ್ನು ಸಹ ಒತ್ತಿಹೇಳುತ್ತದೆ. ‘ಸ್ವೀಡನ್ ಅನ್ನು ಇನ್ನೊಂದು ದೇಶವು ಆಕ್ರಮಣ ಮಾಡಿದರೆ, ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ಪ್ರತಿರೋಧ ಇರುವುದಿಲ್ಲ ಎಂದುಕೊಳ್ಳುವ ಮಾಹಿತಿಯು ಸುಳ್ಳು’ ಎಂದು ಸ್ಪಷ್ಟಪಡಿಸಲಾಗಿದೆ.
ಸುಲಭವಾಗಿ ಬೇಯಿಸಬಹುದಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ತಿನಿಸುಗಳು ಮತ್ತು ಔಷಧಿಗಳನ್ನು ಶೇಖರಿಸಿಕೊಳ್ಳಿ. ಯುದ್ಧ ನಡೆದರೆ ಕನಿಷ್ಠ ಮೂರು ದಿನಗಳ ವರೆಗೆ ನಿಮ್ಮ ಅಗತ್ಯಗಳನ್ನು ನೀವೇ ಪೂರೈಸಿಕೊಳ್ಳುವಷ್ಟು ಈಗಲಿಂದಲೇ ಸಿದ್ಧತೆ ಮಾಡಿಕೊಳ್ಳಿ. ಪರಮಾಣು ದಾಳಿಗಳಿಂದ ಆಹಾರ, ವಿದ್ಯುತ್, ಮೂಲಸೌಕರ್ಯ ಬಿಕ್ಕಟ್ಟುಗಳು ಎದುರಾಗಬಹುದು. ಆದ್ದರಿಂದ ಆಹಾರ ಸಂರಕ್ಷಣೆಗೆ ಒತ್ತು ಕೊಡಿ. ದೀರ್ಘ ಕಾಲದ ವಿದ್ಯುತ್ ಕಡಿತದಂತಹ ಸಮಸ್ಯೆ ನಿಭಾಯಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಜಾನುವಾರುಗಳ ರಕ್ಷಣೆಗೂ ಆದ್ಯತೆ ನೀಡಿ. ನಿಮ್ಮ ಮಕ್ಕಳನ್ನು ಯುದ್ಧದ ಸನ್ನಿವೇಶಗಳಿಗೆ ಭಯಪಡೆದಂತೆ ಮಾನಸಿಕವಾಗಿ ಸಿದ್ಧಗೊಳಿಸಿ. ಹಿರಿಯ ನಾಗರಿಕರು, ದುರ್ಬಲ ಜನರಿಗಾಗಿ ಕಾಳಜಿ ಕ್ರಮಗಳನ್ನು ವಹಿಸಿ ಎಂದು ಸಲಹೆಗಳನ್ನು ನೀಡಲಾಗಿದೆ.
ವಿವಿಧ ಭಾಷೆ, ಡಿಜಿಟಲ್‌ನಲ್ಲೂ ಪುಸ್ತಕ ಲಭ್ಯ
ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅರೇಬಿಕ್, ಪಾರ್ಸಿ ಮತ್ತು ಉಕ್ರೇನಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಪುಸ್ತಕ ಲಭ್ಯವಿದೆ. ಹೆಚ್ಚಿನ ಸಂಖ್ಯೆಯ ಜನರು ಡಿಜಿಟಲ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಪುಸ್ತಕ ಬಿಡುಗಡೆಯಾಗಿದ್ದು, ಇದುವರೆಗೂ ಡಿಜಿಟಲ್‌ನಲ್ಲೇ 55,000 ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಫಿನ್‌ಲ್ಯಾಂಡ್‌ನಿಂದಲೂ ಪುಸ್ತಕ ಬಿಡುಗಡೆ
ರಷ್ಯಾ ಜೊತೆಗೆ 830 ಮೈಲಿಯಷ್ಟು ಗಡಿಯನ್ನು ಫಿನ್‌ಲ್ಯಾಂಡ್ ಹಂಚಿಕೊಂಡಿದೆ. ಆದ್ದರಿಂದ ಸಹಜವಾಗಿ ದೇಶವು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣದ ನಂತರ, ಫಿನ್‌ಲ್ಯಾಂಡ್ 200 ಕಿಲೋಮೀಟರ್ ಗಡಿ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತು. ಗಡಿಯುದ್ದಕ್ಕೂ 10 ಅಡಿ ಎತ್ತರ ಮತ್ತು ಮುಳ್ಳುತಂತಿ ಬೇಲಿ ಹಾಕಲು ಮುಂದಾಗಿದೆ. ಇದು 2026 ರ ವೇಳೆಗೆ ಪೂರ್ಣಗೊಳ್ಳಲಿದೆ. ಯುದ್ಧದ ಭೀಕರ ಸನ್ನಿವೇಶಗಳನ್ನು ನಿಭಾಯಿಸಲು ಫಿನ್‌ಲ್ಯಾಂಡ್ ಕೂಡ ಕರೆ ನೀಡಿ ಪುಸ್ತಕ ಹೊರತಂದಿದೆ. ಫಿನ್‌ಲ್ಯಾಂಡ್‌ನ ಆಂತರಿಕ ಸಚಿವಾಲಯವು, ದೀರ್ಘಾವಧಿಯ ವಿದ್ಯುತ್ ಕಡಿತ, ದೂರಸಂಪರ್ಕ ಅಡೆತಡೆಗಳು ಮತ್ತು ಮಿಲಿಟರಿ ಸಂಘರ್ಷಗಳನ್ನು ನಿಭಾಯಿಸಲು ಈಗಲಿಂದಲೇ ತಯಾರಾಗುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ನ್ಯಾಟೊ ಸೇರಿದ ಸ್ವೀಡನ್, ಫಿನ್‌ಲ್ಯಾಂಡ್
2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ಎರಡೂ ನ್ಯಾಟೋಗೆ ಸೇರಿಕೊಂಡವು. ತಮ್ಮ ದೀರ್ಘಕಾಲದ ತಟಸ್ಥ ನೀತಿಗಳನ್ನು ತ್ಯಜಿಸಿದವು. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಈ ದೇಶಗಳು ತಮ್ಮ ರಕ್ಷಣಾ ಕ್ರಮಗಳನ್ನು ಹೆಚ್ಚಿಸಿವೆ. ಈ ಬದಲಾವಣೆಯು ಒಕ್ಕೂಟದೊಳಗೆ ಸಾಮೂಹಿಕ ರಕ್ಷಣೆ ಮತ್ತು ಬಿಕ್ಕಟ್ಟಿನ ಸಿದ್ಧತೆಗೆ ಕರೆ ನೀಡಲು ಪ್ರಮುಖ ಕಾರಣವಾಗಿದೆ. ಯೂರೋಪ್ ಎದುರಿಸುತ್ತಿರುವ ಭದ್ರತಾ ಸವಾಲುಗಳನ್ನು ಸ್ವೀಡಿಷ್ ಎಂಎಸ್‌ಬಿಯ ಹೇಳಿಕೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ‘ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ನಮ್ಮ ಆಸುಪಾಸಿನಲ್ಲಿ ಯುದ್ಧ ನಡೆಯುತ್ತಿದೆ. ಹವಾಮಾನ ವೈಪರಿತ್ಯಗಳು ಸಾಮಾನ್ಯವಾಗುತ್ತಿವೆ. ನಮ್ಮನ್ನು ದುರ್ಬಲಗೊಳಿಸಲು ಭಯೋತ್ಪಾದಕ ಬೆದರಿಕೆಗಳು, ಸೈಬರ್ ದಾಳಿಗಳು ಹೆಚ್ಚುತ್ತಿವೆ’ ತಿಳಿಸಿದೆ.
ರಷ್ಯಾ-ಉಕ್ರೇನ್ ಯುದ್ಧವು ಅನೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ರಕ್ಷಣಾ ಕಾರ್ಯತಂತ್ರಗಳನ್ನು ಮರುಮೌಲ್ಯಮಾಪನ ಮಾಡಲು ಪ್ರೇರೇಪಿಸಿದೆ. ಸ್ವೀಡನ್ ಮತ್ತು ಫಿನ್‌ಲ್ಯಾಂಡ್ (Finland) ದೇಶಗಳು ತಮ್ಮ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿವೆ. ನ್ಯಾಟೋ ಒಕ್ಕೂಟದ 32 ಸದಸ್ಯ ರಾಷ್ಟ್ರಗಳ ಪೈಕಿ 23 ದೇಶಗಳು ತಮ್ಮ ಜಿಡಿಪಿಯ 2 ಪ್ರತಿಶತದಷ್ಟನ್ನು ಮಿಲಿಟರಿಗಾಗಿ ಖರ್ಚು ಮಾಡುವ ನಿರ್ಣಯ ಕೈಗೊಂಡಿವೆ. ಇತ್ತ ಒಕ್ಕೂಟದ ಭಾಗವಾಗಿರುವ ಸ್ವೀಡನ್, ಫಿನ್‌ಲ್ಯಾಂಡ್ ದೇಶಗಳು ಸಾಮಾಜಿಕ ಸ್ಥಿತಿಸ್ಥಾಪಕತ್ವಕ್ಕಾಗಿ ಸಮಗ್ರ ಸಾರ್ವಜನಿಕ ಜಾಗೃತಿ ಉಪಕ್ರಮಗಳನ್ನು ಪರಿಚಯಿಸಿವೆ. ಪರಮಾಣು, ಜೈವಿಕ ಅಥವಾ ರಾಸಾಯನಿಕ ದಾಳಿಗಳಂತಹ ಭೀಕರ ಸನ್ನಿವೇಶಗಳನ್ನು ಎದುರಿಸಲು ಸಿದ್ಧರಾಗಬೇಕೆಂದು ಸೂಚಿಸಿವೆ.
ರಷ್ಯಾ-ಉಕ್ರೇನ್ ಯುದ್ಧ
ಉಕ್ರೇನ್ ನ್ಯಾಟೋ ಒಕ್ಕೂಟ ಸೇರುವುದನ್ನು ವಿರೋಧಿಸಿದ ರಷ್ಯಾ ಯುದ್ಧ ಘೋಷಿಸಿತು. 2022ರ ಫೆಬ್ರವರಿ 4 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ಹೊರಡಿಸಿದರು. ಎರಡು ದೇಶಗಳ ನಡುವಿನ ಯುದ್ಧದಿಂದ ಇದುವರೆಗೂ ಲಕ್ಷಾಂತರ ಸಾವುನೋವುಗಳಾಗಿವೆ. ರಷ್ಯಾದಲ್ಲೇ 6,96,410 ಸೈನಿಕರು ಮೃತಪಟ್ಟಿದ್ದಾರೆ. ರಷ್ಯಾ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ.
ಇಸ್ರೇಲ್-ಹಮಾಸ್ ಯುದ್ಧ
2023ರ ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವು ನಾಗರಿಕರ ಹತ್ಯೆಗೆ ಕಾರಣರಾದರು. 200 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು. ಇದಕ್ಕೆ ಪ್ರತಿಯಾಗಿ ಹಮಾಸ್ ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿತು. ಪರಿಣಾಮವಾಗಿ ಪ್ಯಾಲೆಸ್ತೀನ್‌ನಲ್ಲಿ ಸಾವಿರಾರು ಜನರ ಸಾವುನೋವಾಯಿತು. ಹಮಾಸ್ ಜೊತೆಗೆ ಹಿಜ್ಬುಲ್ಲಾ ಗುಂಪು ಕೈಜೋಡಿಸಿದ್ದು ಸಂಘರ್ಷ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ. ಈ ನಡುವೆ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.