ಬೆಂಗಳೂರು/ನೆಲಮಂಗಲ: ಮಕ್ಕಳ ಕಲಿಕೆಯ ಹಂತದಲ್ಲಿ ಶಿಕ್ಷೆಗಿಂತ ಪ್ರೀತಿ ಮುಖ್ಯವಾಗುತ್ತದೆ ಎಂದು ಗ್ರೇಟರ್ ನೆಲಮಂಗಲ ಕೈಗಾರಿಕೆಗಳ ಅಸೋಸಿಯೇಷನ್ ಅಧ್ಯಕ್ಷ ಇಟಿಕೆ ರಾಜು ಸಲಹೆ ನೀಡಿದರು. ಪಟ್ಟಣದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಾರ್ಗದರ್ಶಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆಶ್ರಯ ವಿಶೇಷ ಶಾಲೆಯವತಿಯಿಂದ ಆಯೋಜಿಸಲಾಗಿದ್ದ ವಿಶ್ವವಿಕಲಚೇತನ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಉನ್ನತ ಶಿಕ್ಷಣ ಪಡೆದ ಅನೇಕ ಮಕ್ಕಳು ಪೋಷಕರನ್ನು ತ್ಯಜಿಸುವ ಗುಣ ಬೆಳಸಿಕೊಂಡಿದ್ದಾರೆ, ಮಕ್ಕಳಿಗೆ ಮಾನವೀಯ ಗುಣಗಳು ಮೂಡಿದಾಗ ಮಾತ್ರ ಸಮಾಜ ಹಾಗೂ ಕುಟುಂಬಕ್ಕೆ ಶ್ರೇಯಸ್ಸು. ಸವಿಕಲಚೇತನ ಮಕ್ಕಳನ್ನು ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವ ಪೋಷಕರು, ಶಿಕ್ಷಕರು ಹಾಗೂ ಆಶ್ರಯ ಶಾಲೆಯಂತಹ ಸಂಸ್ಥೆಗಳ ಸೇವೆ ಶ್ಲಾಘನೀಯ ಎಂದರು.
Advertisement
Advertisement
ಸಾಹಿತಿ ವೆಂಕಟೇಶ್ ಆರ್ ಚೌತಾಯಿ ಮಾತನಾಡಿ, ಮಕ್ಕಳ ದೈಹಿಕ ವೈಫಲ್ಯವೇ ಅವರ ಜೀವನಕ್ಕೆ ತೊಂದರೆಯಾಗಬಾರದು. ಜಗತ್ತಿನ ಸಾವಿರಾರು ವಿಕಲಚೇತನ ಮಕ್ಕಳು ವಿಶ್ವದ ಜನರು ಅಚ್ಚರಿಪಡುವಂತಹ ಸಾಧನೆ ಮಾಡಿದ್ದಾರೆ. ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರುವ ಮನುಷ್ಯರಿಗಿಂತ ದಿಟ್ಟತನದಿಂದ ಸಮಾಜಕ್ಕೆ ಸೇವೆ ನೀಡುತ್ತಿರುವ ವಿಕಲಚೇತನ ಸಾಧಕರು ನಮ್ಮ ಸಮಾಜದಲ್ಲಿ ಇದ್ದಾರೆ. ಅದರಂತೆ ಇಂತಹ ಮಕ್ಕಳ ನೋವುಗಳಿಗೆ ಸ್ಪಂದಿಸುವ ಆಶ್ರಯ ವಿಶೇಷ ಶಾಲೆ ನೆಲಮಂಗಲ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
Advertisement
ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ರಂಗ ಅಧ್ಯಕ್ಷ ಸಿದ್ದರಾಜು, ಕೆಮ್ ವೆಲ್ ಕಂಪನಿಯ ಹೆಚ್.ಆರ್ ಮಂಜುನಾಥ್, ಐಎಎಸ್‍ಎಸ್ ನಿರ್ದೇಶಕ ಸುಜಿತ್ ಕುಮಾರ್ ದಾಸ್, ಆಶ್ರಯ ವಿಶೇಷ ಶಾಲೆಯ ಅಧ್ಯಕ್ಷೆ ಕಮಲಮ್ಮ, ಸಂಸ್ಥಾಪಕ ಧನಂಜಯ್, ಸಮಾಜ ಸೇವಕ ಬಿ ರಂಗನಾಥ್, ಗೋವಿಂದನಾಯ್ಕ್ , ಶಿಕ್ಷಕಿ ಶೀಲಾ.ಹೆಚ್.ಎನ್ ಹಾಗೂ ಯುಕ್ತಿ ತಂಡದ ಸದಸ್ಯರು ಉಪಸ್ಥಿತರಿದ್ದರು.
Advertisement