ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

Public TV
2 Min Read
RISHAB PANT b

– ಅಂಕ ಪಟ್ಟಿಯಲ್ಲಿ ಡೆಲ್ಲಿ ನಂ.1

ಜೈಪುರ: 2019ರ ವಿಶ್ವಕಪ್ ಟೂರ್ನಿಗೆ ತಮ್ಮನ್ನು ಕೈಬಿಟ್ಟ ಪ್ರಕ್ರಿಯೆ ನೋವು ಇನ್ನು ದೂರವಾಗಿಲ್ಲ ಎಂದು ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್, ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಫೋಟಕ 78 ರನ್ (36 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡ 6 ವಿಕೆಟ್ ಗೆಲುವು ಪಡೆಯಲು ಪಂತ್ ಕಾರಣರಾಗಿದ್ದರು.

ಪಂದ್ಯದ ಬಳಿಕ ಮಾತನಾಡಿದ ಪಂತ್, ಇಂದಿನ ಪ್ರದರ್ಶನ ನನಗೆ ಖುಷಿ ತಂದಿದೆ. ತಂಡಕ್ಕೆ ಈ ಪಂದ್ಯ ಬಹುಮುಖ್ಯವಾದದ್ದು ಎಂಬ ಅರಿವು ನನಗಿತ್ತು. ಆದರೆ ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಈಗಲೂ ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ನೋವು ನನ್ನ ಮನಸ್ಸಿನಲ್ಲಿದೆ ಎಂದರು.

RISHAB PANT a

ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕ ರಹಾನೆ ಶತಕ (105 ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್)ದ ನೆರವಿನಿಂದ ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿತ್ತು. ಡೆಲ್ಲಿ ಪರ ರಿಷಬ್ ಪಂತ್ 78 ರನ್, ಪೃಥ್ವಿ ಶಾ 42 ರನ್, ಅನುಭವಿ ಆಟಗಾರ ಶಿಖರ್ ಧವನ್ 54 ರನ್‍ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 4 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದರು.

ಈ ಬಾರಿಯ ವಿಶ್ವಕಪ್ ಆಯ್ಕೆ ಪ್ರಕ್ರಿಯೆಲ್ಲಿ ರಿಷಬ್ ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್‍ರನ್ನು ಆಯ್ಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

https://twitter.com/cricketfeverrr/status/1120396549115338752

ಡೆಲ್ಲಿ ಸಾಧನೆ: ಇತ್ತ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಡೆಲ್ಲಿ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ತಂಡದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಈ ಬಾರಿ ಹೆಸರು ಬದಲಿಸಿಕೊಂಡು ಕಣಕ್ಕೆ ಇಳಿದಿತ್ತು. ಆರಂಭದಿಂದಲೂ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿರುವ ಯಂಗ್ ಕ್ಯಾಪ್ಟನ್ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಮೊಲದ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯದಲ್ಲಿ 14 ಅಂಕಗಳಿಸಿ 2ನೇ ಸ್ಥಾನ ಪಡೆದಿದ್ದು, 11 ಪಂದ್ಯಗಳಿಂದ ಡೆಲ್ಲಿ 14 ಅಂಕ ಪಡೆದಿದೆ. ಕಳೆದ 11 ಆವೃತ್ತಿ ಗಳಲ್ಲಿ ಡೆಲ್ಲಿ ಮೊದಲ ಸ್ಥಾನವನ್ನು ಪಡೆದಿರಲಿಲ್ಲ.

ಡೆಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಗ್ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ನಂ.1 ಸ್ಥಾನ ಪಡೆದಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಈ ಹಿಂದೆ ಡೆಲ್ಲಿ ವಾಯಮಾಲಿನ್ಯದಲ್ಲಿ ನಂ.1 ಪಟ್ಟ ಪಡೆದಿತ್ತು, ಆದರೆ ಈಗ ಐಪಿಎಲ್ ನಲ್ಲಿ ನಂ.1 ಎಂದರೆ ಅಚ್ಚರಿ ತಂದಿದೆ ಎಂದು ಕಾಲೆಳೆದಿದ್ದಾರೆ.

RISHAB PANT c

Share This Article
Leave a Comment

Leave a Reply

Your email address will not be published. Required fields are marked *