ಮುಂಬೈ: ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 50ನೇ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ.
2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ. ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ಇದರೊಂದಿಗೆ 2019ರ ವಿಶ್ವಕಪ್ ಪಂದ್ಯದಲ್ಲಿ ತಮಗಾದ ನೋವಿಗೆ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
Advertisement
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ್ದರೆ, ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದರು. ಬುಧವಾರ (ನ.15) ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.
Advertisement
ಕಿವೀಸ್ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 80ನೇ ಶತಕ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 50 ಶತಕ ಸಿಡಿಸಿದ್ದಾರೆ. ಇನ್ನೂ 49 ಶತಕಗಳನ್ನು ಸಿಡಿಸಿರುವ ಸಚಿನ್ ತೆಂಡೂಲ್ಕರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement
2019ರ ವಿಶ್ವಕಪ್‌ನಲ್ಲಿ ಏನಾಗಿತ್ತು..?
2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ 18 ರನ್‌ಗಳ ಅಂತರದಿಂದ ಸೋಲನುಭವಿಸಿತ್ತು. ಅಂದು ನಾಯಕನಾಗಿದ್ದ ಕೊಹ್ಲಿ ಕೇವಲ 1 ರನ್‌ಗೆ ಎಲ್‌ಬಿಡಬ್ಲ್ಯೂಗೆ ತುತ್ತಾಗಿದ್ದರು. ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಮಾಡಿದಾಗ ಬಾಲ್ ಟ್ರ‍್ಯಾಂಕಿಂಗ್‌ನಲ್ಲಿ ವಿಕೆಟ್‌ನಿಂದ ಚೆಂಡು ಒಂದಿಂಚು ಮೇಲಿರುವುದು ತೋರಿಸಿತ್ತು. ಆದ್ರೆ ಅದನ್ನು ಅಂಪೈರ್ ತೀರ್ಮಾನಕ್ಕೆ ಬಿಡಲಾಗಿತ್ತು. ಅಂಪೈರ್ ಮೊದಲೇ ಔಟ್ ತೀರ್ಪು ನೀಡಿದ್ದರಿಂದ ಔಟ್ ಎಂದು ಘೋಷಿಸಲಾಯಿತು. ಇದರಿಂದ ಕೊಹ್ಲಿ ಅಂಪೈರ್ಸ್ ಕಾಲ್ ನಿಯಮದ ವಿರುದ್ಧ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ್ದರು.