ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ (World Cup Cricket Final) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು, 20 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ.
2003ರ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ಬಾರಿ ಮುಖಾಮುಖಿಯಾಗಿತ್ತು. ಲೀಗ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತು ಫೈನಲಿಗೆ ಏರಿದ್ದರೆ ಆಸ್ಟ್ರೇಲಿಯಾ ಅಜೇಯ ತಂಡವಾಗಿ ಫೈನಲ್ ತಲುಪಿತ್ತು.
Advertisement
ಎರಡು ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಾಢ್ಯವಾಗಿದ್ದವು. ಸಚಿನ್ ತೆಂಡೂಲ್ಕರ್ (Sachin Tendulkar) ಟೂರ್ನಿಯಲ್ಲೇ 600+ ರನ್ ಸಿಡಿಸಿ ಬೌಲರ್‌ಗಳಿಗೆ ಭಯ ಹುಟ್ಟಿಸಿದ್ದರು.
Advertisement
Advertisement
ಟೀಂ ಇಂಡಿಯಾ ಪರವಾಗಿ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ದಿನೇಶ್ ಮೊಗಿಯಾ ಬ್ಯಾಟಿಂಗ್ ಬಲ ತುಂಬಿದ್ದರೆ ಹರ್ಬಜನ್ ಸಿಂಗ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಅಶೀಶ್ ನೆಹ್ರಾ ಬೌಲಿಂಗ್ ಶಕ್ತಿಯಾಗಿದ್ದರು. ಇದನ್ನೂ ಓದಿ: ಇಂಡೋ-ಆಸೀಸ್ ರೋಚಕ ಫೈನಲ್ ವೀಕ್ಷಿಸಲಿದ್ದಾರೆ ಮೋದಿ – ಸೂಪರ್ ಸಂಡೇ ಏನೆಲ್ಲಾ ಸ್ಪೆಷಲ್ ಇದೆ ಗೊತ್ತಾ?
Advertisement
ಆಸ್ಟ್ರೇಲಿಯಾದಲ್ಲಿ ಗಿಲ್‌ಕ್ರಿಸ್ಟ್, ಹೇಡನ್, ಪಾಟಿಂಗ್, ಡೇಮಿಯನ್ ಮಾರ್ಟಿನ್, ಡ್ಯಾರೆನ್ ಲೆಹ್ಮನ್, ಮೈಕಲ್ ಬೆವನ್, ಸೈಮಂಡ್ಸ್ ಬ್ಯಾಟಿಂಗ್ ಶಕ್ತಿಯಾಗಿದ್ದರು. ಮೆಗ್ರಾಥ್, ಬ್ರೇಟ್ ಲೀ, ಆಂಡಿ ಬಿಕೆಲ್, ಬ್ರಾಡ್ ಹಾಗ್ ಬೌಲರ್‌ಗಳಾಗಿದ್ದರು.
ಎರಡು ಸಮಬಲದ ತಂಡವಾಗಿದ್ದರಿಂದ ನಿರೀಕ್ಷೆಯೂ ಹೆಚ್ಚಿತ್ತು. ಟಾಸ್ ಗೆದ್ದ ಸೌರವ್ ಗಂಗೂಲಿ (Sourav Ganguly) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಕ್ರೀಸ್‌ಗೆ ಆಗಮಿಸಿದ ಕೀಪರ್ ಗಿಲ್‌ಕ್ರಿಸ್ಟ್ ಮತ್ತು ಮಾಥ್ಯೂ ಹೇಡನ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟಿಗೆ 84 ಎಸೆತಗಳಲ್ಲಿ 105 ರನ್ ಜೊತೆಯಾಟ ಬಂದಿತ್ತು.
ಗಿಲ್ ಕ್ರಿಸ್ಟ್ 57 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದ ಬೆನ್ನಲ್ಲೇ ಹೇಡನ್ 37 ರನ್ (54 ಎಸೆತ, 5 ಬೌಂಡರಿ) ಹೊಡೆದು ಔಟಾದರು.
ಆರಂಭಿಕ ಆಟಗಾರರು ಔಟಾದ ನಂತರ ನಾಯಕ ಪಾಂಟಿಂಗ್ (Ricky Ponting) ಮತ್ತು ಮಾರ್ಟಿನ್ (Damien Martyn) ಟೀಂ ಇಂಡಿಯಾದ ಬೌಲರ್‌ಗಳನ್ನು ಅಕ್ಷರಶಃ ಬೆಂಡೆತ್ತಿದ್ದರು. ನಿಧಾನವಾಗಿ ರನ್ ಪೇರಿಸಿದ ಜೋಡಿ ನಂತರ ಆಕ್ರಮಣಕಾರಿಯಾಗಿ ಆಡಲು ಆರಂಭಿಸಿತು.
ಪಾಂಟಿಂಗ್ 74 ಎಸೆತಗಳಲ್ಲಿ ಅರ್ಧಶತಕ ಹೊಡೆದಾಗ ಕೇವಲ 1 ಬೌಂಡರಿ ಮಾತ್ರ ಹೊಡೆದಿದ್ದರು. 103 ಎಸೆತಗಳಲ್ಲಿ ಶತಕ ಹೊಡೆದ ಪಾಂಟಿಂಗ್ ಅಂತಿಮವಾಗಿ ಔಟಾಗದೇ 140 ರನ್(121 ಎಸೆತ, 4 ಬೌಂಡರಿ, 8 ಸಿಕ್ಸರ್) ಚಚ್ಚಿದ್ದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಮಾರ್ಟಿನ್ ಔಟಾಗದೇ 88 ರನ್ (84 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರು. ಇದನ್ನೂ ಓದಿ: ನಾಯಕ ಬವುಮಾ ಎಡವಟ್ಟಿನ ನಿರ್ಧಾರದಿಂದಲೇ ದ.ಆಫ್ರಿಕಾಗೆ ಸೋಲು?
ಭಾರತದ ಪರವಾಗಿ 8 ಮಂದಿ ಬೌಲ್ ಮಾಡಿದರೂ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ. ಬೌಲರ್‌ಗಳ ಸಹ ಸುಸ್ತಾಗಿ ಹೋಗಿ ಇತರ ರೂಪದಲ್ಲೂ ರನ್ ನೀಡತೊಡಗಿದರು. ಅಂತಿಮವಾಗಿ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 359 ರನ್ ಬೃಹತ್ ಮೊತ್ತ ಪೇರಿಸಿದ್ದರೆ ಪಾಟಿಂಗ್ ಮತ್ತು ಮಾರ್ಟಿನ್ ಮುರಿಯದ ಮೂರನೇ ವಿಕೆಟಿಗೆ 181 ಎಸೆತಗಳಿಗೆ 234 ರನ್ ಜೊತೆಯಾಟವಾಡಿದ್ದರು. ಭಾರತ ಇತರೇ ರೂಪದಲ್ಲಿ 37 ರನ್(2 ಬೈ, 12 ಲೆಗ್‌ಬೈ, 7 ನೋಬಾಲ್, 16 ವೈಡ್) ನೀಡಿತ್ತು. ಶ್ರೀನಾಥ್ 87 ರನ್ ನೀಡಿದ್ದರೆ ಜಹೀರ್ ಖಾನ್ 7 ಓವರ್ ಎಸೆದು 67 ರನ್ ನೀಡಿದ್ದರು.
ಆರಂಭದಲ್ಲೇ ಆಘಾತ:
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಚಿನ್ ಮೇಲೆ ಇಡೀ ಭಾರತೀಯರ ನಿರೀಕ್ಷೆ ಇತ್ತು. ತೆಂಡೂಲ್ಕರ್ ಗ್ಲೇನ್ ಮೆಗ್ರಾಥ್ ಎಸೆದ ಮೊದಲ ಓವರ್‌ನಲ್ಲೇ ಬೌಂಡರಿ ಹೊಡೆದಿದ್ದರು. ಆದರೆ 5ನೇ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಮೆಗ್ರಾಥ್‌ಗೆ ಕ್ಯಾಚ್ ನೀಡಿ ಭಾರವಾದ ಹೆಜ್ಜೆ ಹಾಕುತ್ತಾ ಪೆವಿಲಿಯನ್ ಕಡೆಗೆ ನಡೆದರು.
ವೀರೇಂದ್ರ ಸೆಹ್ವಾಗ್ ಮತ್ತು ಗಂಗೂಲಿ ಸ್ವಲ್ಪ ಪ್ರಯತ್ನ ಮಾಡಿದರೂ ಉತ್ತಮ ಜೊತೆಯಾಟ ಬರಲಿಲ್ಲ. ಗಂಗೂಲಿ 24 ರನ್, ದ್ರಾವಿಡ್ 47 ರನ್, ಯುವರಾಜ್ 24 ರನ್ ಗಳಿಸಿ ಔಟಾದರೆ ಕೈಫ್ ಶೂನ್ಯ ಸುತ್ತಿದರು. 81 ಎಸೆತ ಎದುರಿಸಿ 3 ಸಿಕ್ಸ್, 10 ಬೌಂಡರಿಯೊಂದಿಗೆ 82 ರನ್ ಹೊಡೆದು ಅಬ್ಬರಿಸುತ್ತಿದ್ದ ಸೆಹ್ವಾಗ್ ಅವರನ್ನು ಲೆಹ್ಮನ್ ರನೌಟ್ ಮಾಡಿದರು.
ಆಸೀಸ್ ಬೌಲರ್‌ಗಳ ಎಸೆತಗಳಿಗೆ ಬ್ಯಾಟ್ಸಮನ್‌ಗಳು ರನ್‌ಗಳಿಸಲು ಪರದಾಡಿದ್ದರು. ಮೆಗ್ರಾಥ್ 3 ವಿಕೆಟ್ ಪಡೆದರೆ, ಬ್ರೇಟ್ ಲೀ ಮತ್ತು ಸೈಮಂಡ್ಸ್ 2 ವಿಕೆಟ್ ಕಿತ್ತರು. ಆರಂಭದಿಂದಲೇ ಕುಸಿತ ಕಂಡ ಭಾರತ ಅಂತಿಮವಾಗಿ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯ್ತು. 125 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಸೇಡು ತೀರಿಸುತ್ತಾ?
ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುತ್ತಿರುವ ಕಾರಣ 20 ವರ್ಷದ ಹಿಂದಿನ ಸೇಡು ತೀರಿಸುತ್ತಾ ಎಂಬ ಪ್ರಶ್ನೆ ಅಭಿಮಾನಿಗಳದ್ದು. 2003ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು. ಈ ಬಾರಿಯೂ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಲೀಗ್ ಪಂದ್ಯದಲ್ಲಿ ಸೋತಿದೆ. ಭಾರತ ಅಜೇಯವಾಗಿ ಫೈನಲ್ ತಲುಪಿದ್ದರೆ ಆಸ್ಟ್ರೇಲಿಯಾ 2 ಪಂದ್ಯ ಸೋತು ನಂತರ ಚೇತರಿಸಿ ಫೈನಲ್ ತಲುಪಿದೆ. ಭಾರತ ಅಜೇಯ ತಂಡ ಆಗಿದ್ದರೂ ಆಸ್ಟ್ರೇಲಿಯಾವನ್ನು ಸುಲಭವಾಗಿ ಪರಿಗಣಿಸುವ ಹಾಗಿಲ್ಲ. ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯುವ ಸಾಧ್ಯತೆಯಿದೆ.