ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

Public TV
2 Min Read
FIFA FOOTBALL

ಮಾಸ್ಕೋ: ಇಂಜುರಿ ಟೈಂನ ಕೊನೆಯ ಕ್ಷಣದಲ್ಲಿ (90+4ನೇ ನಿಮಿಷ) ಮಿಡ್‍ಫೀಲ್ಡರ್ ನಾಸೆರ್ ಚಾಡ್ಲಿ ಗಳಿಸಿದ ಸುಂದರ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ರೋಚಕವಾಗಿ ಮಣಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ರೋಸ್ಟೋವ್ ಅರೆನಾದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು 2 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್, ನಂತರದಲ್ಲಿ 3 ಗೋಲು ಬಿಟ್ಟುಕೊಟ್ಟು ಕೂಟದಿಂದಲೇ ಹೊರನಡೆಯಿತು.

ಗೋಲು ರಹಿತ ಮೊದಲಾರ್ಧದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್, 48ನೇ ನಿಮಿಷದಲ್ಲಿ ಶಿಬಾಸ್ಕಿ ನೀಡಿದ ಪಾಸ್ ಮೂಲಕ ಮಿಡ್ ಫೀಲ್ಡರ್ ಜೆಂಕಿ ಹರಗುಚಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಮೊದಲನೇ ಗೋಲು ದಾಖಲಿಸಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿಯೇ ಎರಡನೇ ಗೋಲು ದಾಖಲಿಸಿದ ಜಪಾನ್, ಬೆಲ್ಜಿಯಂಗೆ ಡಬಲ್ ಶಾಕ್ ನೀಡಿತು.

52ನೇ ನಿಮಿಷದಲ್ಲಿ ಕಗಾವಾ ಅಸಿಸ್ಟ್ ನೆರವಿನಿಂದ ಚೆಂಡನ್ನು ಪಡೆದ ತಕಾಶಿ ಇನೂಯ್, ಡಿ ಬಾಕ್ಸ್‍ನ ಹೊರಗಡೆಯಿಂದಲೇ ಗೋಲ್ ಪೋಸ್ಟ್ ನ ಬಲತುದಿಯನ್ನು ಗುರಿಯಾಗಿಸಿ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಗುರಿ ಸೇರಿತು. 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್ ಪಂದ್ಯ ಗೆದ್ದೇ ಬಿಟ್ಟಿತು ಎಂಬ ವಿಶ್ವಾಸದಲ್ಲಿರುವಾಗಲೇ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದ ಬೆಲ್ಜಿಯಂ, ಜಪಾನ್ ತಂಡ ಬೆಚ್ಚಿಬೀಳುವಂತೆ ಮಾಡಿತು.

japan fans afp 625x300 1530589809403

69ನೇ ನಿಮಿಷದಲ್ಲಿ ಡಿ ಬಾಕ್ಸ್‍ನಿಂದಲೇ ಆಕರ್ಷಕ ಹೆಡರ್ ಮೂಲಕ ಜಪಾನ್ ಗೋಲಿ ಕವಾಶಿಮಾರನ್ನು ವಂಚಿಸಿದ ಮಿಡ್ ಫೀಲ್ಡರ್ ವೇರೊಂಗನ್ ಮೊದಲ ಗೋಲು ದಾಖಲಿಸಿದರು. ಹಝಾರ್ಡ್ ಪಾಸ್ ಅನ್ನು ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದ ಅನುಭವಿ ಅಟಗಾರ ಮರೌನೆ ಫೆಲೈನಿ 74ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಸಾಧಿಸುವಂತೆ ಮಾಡಿದರು. ಮತ್ತಷ್ಟು ರೋಚಕತೆಯತ್ತ ತಿರುಗಿದ ಪಂದ್ಯ ನಿಗದಿತ ಅವಧಿ ಮುಗಿದು, ಇನ್ನೇನು ಇಂಜುರಿ ಟೈಂ ಮುಗಿಯಿತು ಎನ್ನುವಷ್ಟರಲ್ಲಿ ಮಿಂಚಿನ ಕೌಂಟರ್ ಅಟ್ಯಾಕ್ ನಡೆಸಿದ ಬೆಲ್ಜಿಯಂ, ಸ್ಟಾರ್ ಅಟಗಾರ ಕೆವಿನ್ ಡಿ ಬ್ರೂನೆ, ಮಿನ್ಯೂಯೆರ್ ಶರವೇಗದಲ್ಲಿ ನೀಡಿದ ಪಾಸ್‍ಗೆ ಅಂತಿಮ ಟಚ್ ಕೊಟ್ಟ ನಾಸೆರ್ ಚಾಡ್ಲಿ, ಬೆಲ್ಜಿಯಂಗೆ ಅವಿಸ್ಮರಣೀಯ ಜಯ ತಂದಿತ್ತರು.

ಮುನ್ನಡೆ ಸಾಧಿಸಿದ ಬಳಿಕ ರಕ್ಷಣಾ ವಿಭಾಗವನ್ನು ಹೆಚ್ಚು ಬಲಪಡಿಸಿ ಪಂದ್ಯ ಉಳಿಸಿಕೊಳ್ಳುವ ಫುಟ್ಬಾಲ್‍ನ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಕೈಬಿಟ್ಟಿದ್ದೇ ಜಪಾನ್ ಸೋಲಿಗೆ ಕಾರಣವಾಯಿತು. ಈ ಗೆಲುವಿನ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಎರಡು ಗೋಲಿನಿಂದ ಹಿಂದಿದ್ದು, ಬಳಿಕ ನಿಗದಿತ ಅವಧಿಯಲ್ಲಿ ಪಂದ್ಯ ಗೆದ್ದ ಮೊದಲ ತಂಡವೆಂಬ ದಾಖಲೆ ಬೆಲ್ಜಿಯಂ ಪಾಲಾಯಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 2-0 ಗೋಲಿನ ಅಂತರದಲ್ಲಿ ಗೆದ್ದ ಬ್ರಜಿಲ್ ತಂಡವನ್ನು ಕ್ವಾರ್ಟರ್ ಫೈನಲ್‍ನಲ್ಲಿ ಬೆಲ್ಜಿಯಂ ಎದುರಿಸಲಿದೆ.

Share This Article