ಮಾಸ್ಕೊ: ಪೆನಾಲ್ಟಿ ಶೂಟೌಟ್ ಕ್ಲೈಮಾಕ್ಸ್ ಕಂಡ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ, ಡ್ಯಾನಿಶ್ ಡೈನಮೈಟ್ ಖ್ಯಾತಿಯ ಡೆನ್ಮಾರ್ಕ್ ಸವಾಲನ್ನು ಮೀರಿ ನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ನೊವ್‍ಗರೊಡ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯ (15+15ನಿಮಿಷ)ದಲ್ಲೂ ಚೆಂಡು ಗೋಲು ಬಲೆ ದಾಟಲು ಉಭಯ ತಂಡಗಳ ಗೋಲು ಕೀಪರ್‍ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ 3 ಸ್ಪಾಟ್ ಕಿಕ್‍ಗಳಿಗೆ ತಡೆಗೋಡೆಯಾದ ಕ್ರೊಯೇಶಿಯಾದ ಡೆನಿಜೆಲ್ ಸುಬಾಸಿಕ್, 3-2ರ ಅಂತರದಲ್ಲಿ ಡೆನ್ಮಾರ್ಕ್ ವಿರುದ್ಧ ಗೆಲುವು ತಂದಿತ್ತು, ತಂಡವನ್ನು ಕ್ವಾರ್ಟರ್ ಫೈನಲ್ ಹಂತಕ್ಕೆ ಕೊಂಡೊಯ್ದರು.
ಪಂದ್ಯ ಆರಂಭವಾಗಿ ಕೇವಲ 57ನೇ ಸೆಕೆಂಡ್‍ನಲ್ಲೇ ಕ್ರೊವೇಶಿಯಾದ ರಕ್ಷಣಾ ಗೋಡೆಯನ್ನು ಭೇದಿಸಿದ ಜಾರ್ಗೆನ್‍ಸನ್ ಡೆನ್ಮಾರ್ಕ್‍ಗೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಮುಂದಿನ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಶಿಯಾದ ಮಾರಿಯೊ ಮಂಡ್ಜುವಿ ಕ್ರೊವೇಶಿಯಾಗೆ ಸಮಬಲ ತಂದುಕೊಟ್ಟರು. ಹೀಗಾಗಿ ಪಂದ್ಯ ಆರಂಭವಾಗಿ ಕೇವಲ ನಾಲ್ಕು ನಿಮಿಷದ ಅಂತರದಲ್ಲಿ ಉಭಯ ತಂಡಗಳು ಗೋಲು ಗಳಿಸಿದ ಅಪರೂಪದ ದಾಖಲೆಯ ಕ್ಷಣಕ್ಕೆ ಪಂದ್ಯ ಸಾಕ್ಷಿಯಾಯಿತು.
ಬಳಿಕ ಎರಡು ಗಂಟೆಗಳ ಕಾಲ ಉಭಯ ತಂಡಗಳ ಆಟಗಾರರು ನೊವ್‍ಗರೊಡ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸಿದರೂ ಗೋಲು ದಾಖಲಾಗಲಿಲ್ಲ. ಲೂಕಾ ಮಾಡ್ರಿಕ್, ಮಾರಿಯೋ ಮಾಂಡುಜುಕಿಕ್, ಇವಾನ್ ರಾಕೆಟಿಕ್, ಇವಾನ್ ಪೆರಿಸಿಕ್‍ರಂಥ ಸ್ಟಾರ್ ಆಟಗಾರರನ್ನು ಹೊಂದಿದ್ದ ಕ್ರೊವೇಷಿಯಾವನ್ನು, ಕೋಚ್ ಏಜ್ ಹರಾಯ್ಡ್ ಹೆಣೆದ ತಂತ್ರಗಳ ನೆರವಿನಿಂದ ಡೆನ್ಮಾರ್ಕ್ ಕಟ್ಟಿಹಾಕಿತು. ಹೆಚ್ಚುವರಿ ಅವಧಿ ಮುಗಿಯುವ ಐದು ನಿಮಿಷಕ್ಕೂ ಮೊದಲೇ ಕ್ರೊವೇಶಿಯಾ ಗೆಲುವಿನ ಗೋಲು ಬಾರಿಸಬೇಕಿತ್ತು. ಆದರೆ ನಾಯಕ ಲೂಕಾ ಮಾಡ್ರಿಕ್ ಪೆನಾಲ್ಟಿಯನ್ನು ಡೆನ್ಮಾರ್ಕ್ ಗೋಲಿ ಕಾಸ್ಪರ್ ಶೆಮಿಚೆಲ್ ಅದ್ಭುತವಾಗಿ ತಡೆದು, ಪಂದ್ಯವನ್ನು ಪೆನಾಲ್ಟಿ ಶೂಟೌಟ್‍ಗೆ ಒಯ್ದರು.
ಮೊದಲ ಪೆನಾಲ್ಟಿ ಕಿಕ್‍ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ಬಳಿಕ ಕ್ರೊವೇಷಿಯಾ ಪರ ಆಂದ್ರೆಜ್ ಕ್ರಾಮರಿಕ್, 32 ವರ್ಷ ವಯಸ್ಸಿನ ರಿಯಲ್ ಮ್ಯಾಡ್ರಿಡ್ ಸ್ಟಾರ್ ಲೂಕಾ ಮಾಡ್ರಿಕ್, ಜೋಸೆಫ್ ಪಿವಾರಿಕ್, ಹಾಗೂ ಬಾರ್ಸಿಲೋನಾದ ಇವಾನ್ ರಾಕೆಟಿಕ್ ಗೋಲು ಗಳಿಸಿ ಗೆಲುವಿನ ನಗೆ ಬೀರಿದರು. ಮತ್ತೊಂದೆಡೆ ಡೆನ್ಮಾರ್ಕ್ ಪರ ಎಸ್ ಕಜೇರ್, ಕ್ರೋನ್ ಡೆಹ್ಲಿ ಗೋಲು ಬಾರಿಸಿದರೆ, ಎರಿಕ್ಸನ್, ಸೋಪೋಸ್ ಹಾಗೂ ಜೋರ್ಗನ್‍ಸನ್ ಅಪೂರ್ವ ಅವಕಾಶವನ್ನು ಮಿಸ್ ಮಾಡಿ ನಿರಾಸೆ ಅನುಭವಿಸಿದರು. ಆ ಮೂಲಕ 1998ರಲ್ಲಿ 3ನೇ ಸ್ಥಾನ ಪಡೆದಿದ್ದ ಕ್ರೊವೇಷಿಯಾ, ಈ ಬಾರಿಗೆ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯಿತು. ಶನಿವಾರ ನಡೆಯುವ ಕ್ವಾರ್ಟರ್ ಫೈನಲ್‍ನಲ್ಲಿ ಆತಿಥೇಯ ರಷ್ಯಾವನ್ನು ಕ್ರೊವೇಷಿಯಾ ಎದುರಿಸಲಿದೆ.