ಇತ್ತೀಚೆಗೆ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ ಕೇರಂ ವಿಶ್ವಕಪ್‌ನಲ್ಲಿ ಮಹಿಳಾ ಸಿಂಗಲ್ಸ್, ಮಹಿಳಾ ಡಬಲ್ಸ್ ಮತ್ತು ಮಹಿಳಾ ತಂಡ ಚಾಂಪಿಯನ್ ಶಿಪ್ – ಮೂರು ಪ್ರಶಸ್ತಿಗಳನ್ನು ಗೆದ್ದ ವಿಶ್ವ ಚಾಂಪಿಯನ್ 16 ವರ್ಷ ವಯಸ್ಸಿನ ಎಂ.ಬಿ. ಖಾಜಿಮಾ (MB Khazima) ಅವರ ಸಾಧನೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ನಿಹಾನ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಾಗೇಶ್ ಪಾಟೀಲ್ ಟಿ ಅವರು ಮುಂದಾಗಿದ್ದಾರೆ.
ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಮುರಳಿ ಎಸ್.ವೈ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಚೆನ್ನೈನ ಪ್ರಸಾದ್ ಲ್ಯಾಬ್ ನಲ್ಲಿ ನಡೆದಿದ್ದು, ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

ಚಲನಚಿತ್ರ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಡುತ್ತಿರುವ ನಿಹಾನ್ ಎಂಟರ್ಟೈನ್ಮೆಂಟ್ (Nihan Entertainment)ಸಂಸ್ಥೆ, ತನ್ನ ಮೊದಲ ನಿರ್ಮಾಣವಾಗಿ “ದಿ ಕ್ಯಾರಮ್ ಕ್ವೀನ್” ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವತಿಯೊಬ್ಬಳು ತನ್ನ ಪ್ರತಿಭೆ, ಶ್ರಮ ಮತ್ತು ಅಸಾಧಾರಣ ಹೋರಾಟದ ಮೂಲಕ ಕ್ಯಾರಮ್ ಕ್ರೀಡೆಯಲ್ಲಿ ಸಾಧಿಸಿದ ಪಯಣವೇ ಈ ಚಿತ್ರದ ಪ್ರಮುಖ ಕಥಾಹಂದರ.
ತಮಿಳು ಚಲನಚಿತ್ರರಂಗದ ಪ್ರತಿಭಾವಂತ ನಟ ಕಾಳಿ ವೆಂಕಟ್, ರಾಂಧ್ಯ ಭೂಮೇಶ್ ಗೌಡ ಹಾಗೂ ರಿಶಿ ಪ್ರಕಾಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದೆಂದು ನಿರ್ದೇಶಕ ಮುರಳಿ ಎಸ್ ವೈ ತಿಳಿದಿದ್ದಾರೆ.

