ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ 1 ಮತ್ತು 4ರ ನಡುವಿನ ಕದನಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಪಾಲಿಗೆ ಬಹುತೇಕ ಇವತ್ತೇ ನಿರ್ಣಾಯಕ ದಿನವಾಗಲಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಒಬ್ಬ ನಾಯಕರಿಗೆ ನಂಬರ್ 1 ಫೇವರೇಟ್ ಆಗಿದ್ದರೆ ಇನ್ನೊರ್ವ ನಾಯಕನಿಗೆ ನಂಬರ್ 4 ಫೇವರೇಟ್ ಆಗಿತ್ತು. ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು ಇಂದು ಸಂಜೆಯೊಳಗೆ ಇದು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ. ಹಾಗಿದ್ದು ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ನಾಲ್ಕು ಜನ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದ್ದರು.
ಇತ್ತ ಕೈ ಪಾಳಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದೇ ಕಾರ್ಯಾಧ್ಯಕ್ಷ ಸ್ಥಾನ ಸಾಕು ಎಂಬ ಹಠಕ್ಕೆ ಬಿದ್ದಿದ್ದರು. ಕಾರ್ಯಾಧ್ಯಕ್ಷ ಸ್ಥಾನಮಾನ ಏನೇ ಇರಲಿ ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವಿನ ಫೈಟ್ ನಲ್ಲಿ ಯಾರ ಕೈ ಮೇಲಾಗುತ್ತದೋ ಎನ್ನುವುದೇ ಸದ್ಯದ ಕುತೂಹಲ.