ಗದಗ: ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ವೇತನ ಜಾರಿಗಾಗಿ ಆಗ್ರಹಿಸಿ ಪೌರಕಾರ್ಮಿಕರು ಗದಗ-ಬೆಟಗೇರಿ ನಗರಸಭೆಯ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.
ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 7 ತಿಂಗಳು ಹಾಗೂ ಖಾಯಂ ನೌಕರರಿಗೆ 3 ತಿಂಗಳಿಂದ ವೇತನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಸರಿಯಾದ ಸಂಬಳ ಸಿಗದ ಕಾರಣಕ್ಕೆ ತಮ್ಮ ಕುಟುಂಬಗಳು ನಿತ್ಯ ಊಟಕ್ಕೂ ಪರಿತಪಿಸುವಂತಾಗಿದೆ. ಆದರೆ ನಗರಸಭೆ ಅಧಿಕಾರಿಗಳಿಗೆ ಮಾತ್ರ ಕಾರ್ಮಿಕರ ಕಷ್ಟ ಕಾಣುತ್ತಿಲ್ಲ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಗೇಟ್ ಬಂದ್ ಮಾಡಿ ಕಚೇರಿ ಎದುರು ವಾಹನಗಳನ್ನು ಇಟ್ಟು ಕಾರ್ಮಿಕರು ಅರೆಬೆತ್ತಲೆ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದರು. ವೇತನ ನೀಡಿ, ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದರು. ಜೊತೆಗೆ ಕಷ್ಟ ಪಟ್ಟು ಮಾಡುವ ಕೆಲಸಕ್ಕೆ ನಮಗೆ ನೀಡಬೇಕಾದ ವೇತನ ಜಾರಿಗೊಳಿಸಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.